ತಿರುವನಂತಪುರಂ : ಪಾಲಕ್ಕಾಡ್ ಪುರಸಭೆ ಕಟ್ಟಡದಲ್ಲಿ ಬಿಜೆಪಿ ಕಾರ್ಯಕರ್ತರ ಚಟುವಟಿಕೆಗಳನ್ನು ವಿರೋಧಿಸಿ ಡಿವೈಎಫ್‌ಐ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಬಿಜೆಪಿ ಸದಸ್ಯರು ಜೈ ಶ್ರೀ ರಾಮ್ ಮತ್ತು ಮೋದಿ-ಷಾ ಬ್ಯಾನರ್‌ಗಳನ್ನು ಬುಧವಾರ ಹಾರಿಸಿದ್ದರು, ಇದನ್ನು ವಿರೋಧಿಸಿ ಡಿವೈಎಫ್‌ಐ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಪುರಸಭೆಯನ್ನು ಉಳಿಸಿಕೊಂಡ ನಂತರ ಬುಧವಾರ, ಬಿಜೆಪಿ ಸದಸ್ಯರು ಪಾಲಕ್ಕಾಡ್ ಪುರಸಭೆ ಕಚೇರಿಯಲ್ಲಿ ವಿಜಯೋತ್ಸವವನ್ನು ನಡೆಸಿದರು. ಸಂಭ್ರಮಾಚರಣೆಯ ಅಂಗವಾಗಿ ಪುರಸಭೆಯ ಕಟ್ಟಡವನ್ನು ಹತ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬ್ಯಾನರ್‌ಗಳನ್ನು ಹಾರಿಸಿದ್ದರು. ಕೆಲವರು ಶಿವಾಜಿಯ ಬ್ಯಾನರ್ ಅನ್ನು, ಜೈ ಶ್ರೀರಾಮ್ ಫ್ಲಕ್ಸ್ ಅನ್ನು ಹಾಕಿದ್ದರು.
ಸಾಂವಿಧಾನಿಕ ಕಚೇರಿಯಲ್ಲಿ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸಬಹುದಾ? ಎಂದು ಹಲವರು ಪ್ರಶ್ನಿಸಿದ್ದರಿಂದ ಇದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಡಿವೈಎಫ್ಐ ಬಿಜೆಪಿಯ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿತ್ತು.
ಡಿವೈಎಫ್ಐ ಘಟಕ ಪುರಸಭೆ ಕಾರ್ಯದರ್ಶಿ ಗೆ ದೂರು ನೀಡಿ ಕ್ರಮ ಜರುಗಿಸುವಂತೆ ಆಗ್ರಹಿಸಿತ್ತು. ಅದರನ್ವಯ
ಪುರಸಭೆ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪುರಸಭೆಯ ಕಚೇರಿ, ಸಾಂವಿಧಾನಿಕ ಸಂಸ್ಥೆಯ ಮೇಲಿರುವ ಗೋಡೆಯ ಮೇಲೆ ‘ಜೈ ಶ್ರೀರಾಮ್’ ಬ್ಯಾನರ್ ಹರಡಿದ್ದಾರೆ ಎಂದು ಟೌನ್ ಸೌತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಡಿವೈಎಫ್ ಐ ಕಾರ್ಯಕರ್ತರು ಮೋದಿ, ಶಾ ಫೋಟೊ ತೆಗೆದು ಹಾಕಿ ಆ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ, ಸಂವಿಧಾನದ ಆಶಯ ಕಾಪಾಡುವ ಮೂಲಕ ದೇಶಪ್ರೇಮವನ್ನು ಮೆರದಿದ್ದಾರೆ ಎಂದು ಪಲಕ್ಕಾಡ ಜನ ಶ್ಲಾಘಿಸಿದ್ದಾರೆ.