ನವದೆಹಲಿ: ನೂತನ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ಅನಾವರಣ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸದೇ ಇರುವುದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಗೊಂಡಿದೆ. ಅಲ್ಲದೆ, ಸಂಸತ್ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಕ್ಕೂ ಮತ್ತು ಕಾರ್ಯಾಂಗ ಮುಖ್ಯಸ್ಥನಾಗಿ ಶಾಸಕಾಂಗದ ಕಟ್ಟಡದಲ್ಲಿ ಲಾಂಛನ ಉದ್ಘಾಟಿಸಿದರ ಬಗ್ಗೆಯೂ ಕೇದ್ರ ಸರ್ಕಾರ ಟೀಕೆಗೆ ಗುರಿಯಾಗಿದೆ.
ಇದೀಗ ಹೊಸ ವಿವಾದವೊಂದು ಎದುರಾಗಿದ್ದು, ರಾಷ್ಟ್ರ ಲಾಂಛನದಲ್ಲಿ ಬದಲಾವಣೆ ಮಾಡಲಾಗಿದೆಯೇ ಎಂಬ ವಿಚಾರವು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ, ಅನಾವರಣಗೊಂಡ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿರೂಪಗೊಳಿಸಿದೆ ಎಂದು ಟೀಕೆ ವ್ಯಕ್ತಪಡಿಸಿವೆ.
ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹ ಭಾರತ ರಾಷ್ಟ್ರ ಲಾಂಛನವಾಗಿದೆ. ನರೇಂದ್ರ ಮೋದಿ ಅನಾವರಣಗೊಳಿಸಿರುವ ಹೊಸ ಲಾಂಛನದಲ್ಲಿ ಸಿಂಹಗಳು ಬಾಯಿ ತೆರೆದಿದ್ದು ಎರಡು ಕೋರೆ ಹಲ್ಲುಗಳು ಕಾಣುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿ ಜಾಲತಾಣದಲ್ಲಿ ಹಲವಾರು ಮಂದಿ ಈ ವಿಚಾರವಾಗಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಇತಿಹಾಸಕಾರ ಎಸ್.ಇರ್ಫಾನ್ ಹಬೀಬ್ ಅವರು ಪ್ರಧಾನಿ ಅನಾವರಣಗೊಳಿಸಿರುವ ರಾಷ್ಟ್ರೀಯ ಲಾಂಛನದ ಶೈಲಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ರಾಷ್ಟ್ರೀಯ ಲಾಂಛನ ವಿಷಯದಲ್ಲೂ ಹಸ್ತಕ್ಷೇಪ ಮಾಡುವುದು ಅನಗತ್ಯ, ಇದನ್ನು ತಪ್ಪಿಸಬಹುದಾಗಿತ್ತು. ನಮ್ಮ ಲಾಂಛನದ ಸಿಂಹಗಳು ಏಕೆ ಆಕ್ರಮಣಕಾರಿಯಾಗಿ ತೋರಬೇಕು. ಇವು, ಅಶೋಕ ಸಿಂಹಗಳು. 1950ರಲ್ಲಿಯೇ ಅಂಗೀಕರಿಸಲಾಗಿದೆ’ ಎಂದು ಹಬೀಬ್ ಹೇಳಿದ್ದಾರೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ʼಗಾಂಧಿಯಿಂದ ಗೋಡ್ಸೆಯವರೆಗೆʼ ಎಂದು ಟ್ವೀಟ್ ಮಾಡಿದ್ದು, “ಗಾಂಧಿಯಿಂದ ಗೋಡ್ಸೆಯವರೆಗೆ; ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳು ಭವ್ಯವಾಗಿ ಮತ್ತು ಶಾಂತಿಯುತವಾಗಿ ಕುಳಿತಿವೆ. ಸೆಂಟ್ರಲ್ ವಿಸ್ತಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ಅನಾವರಣಗೊಂಡ ಹೊಸ ರಾಷ್ಟ್ರೀಯ ಲಾಂಛನಗಳು ಕೋರೆಹಲ್ಲುಗಳನ್ನು ಹೊಂದಿರುವ ಕೆರಳಿರುವ ಸಿಂಹಗಳು. ಇದು ಮೋದಿಯ ನವ ಭಾರತ ಎಂದು ವ್ಯಂಗ್ಯವಾಡಿದ್ದಾರೆ.
ಸಂಸದ ಜವಹರ್ ಸಿರ್ಕಾರ್, ‘ಗಂಭೀರ ಮುಖಭಾವವಿದ್ದ ಅಶೋಕಸ್ತಂಭದ ಸಿಂಹಗಳ ಮುಖವೊಂದಿರುವ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ ಮಾಡಲಾಗಿದೆ. ಅಸಲಿ ಲಾಂಛನದಲ್ಲಿ: ಘನತೆ, ಆತ್ಮವಿಶ್ವಾಸ ಬಿಂಬಿಸಲಿದೆ. ಮೋದಿ ಆವೃತ್ತಿಯದು. ‘ಗುರ್ ಎನ್ನುವಂತಿರುವ, ಅನಗತ್ಯವಾಗಿ ಆಕ್ರಮಣ ಶೈಲಿ ಬಿಂಬಿಸುವ ಲಾಂಛನ’. ನಾಚಿಕೆ ಆಗಬೇಕು. ತಕ್ಷಣ ಇದನ್ನು ಬದಲಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಪಕ್ಷವು ಸಹ ಮೂಲ ಲಾಂಛನದಲ್ಲಿ ನಾಲ್ಕು ಸಿಂಹಗಳ ಮುಖದಲ್ಲಿ ಸೌಮ್ಯವಿದೆ. ಆದರೆ ಹೊಸದಾಗಿ ಅನಾವರಣಗೊಂಡ ಸಿಂಹಗಳು ಬಾಯಿ ತೆರೆದಿದ್ದು ಎಲ್ಲವನ್ನೂ ನುಂಗುವ ಪ್ರವೃತ್ತಿಯಲ್ಲಿದೆ ಎಂದು ಟೀಕಿಸಿದೆ.
ಇನ್ನು ಕೆಲವರು ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಭಾರತ ವಿದೇಶಗಳಿಗೆ ತಲೆ ಬಾಗಿತ್ತು. ಆದರೆ ಮೋದಿ ಅವಧಿಯಲ್ಲಿ ಸಿಂಹದಂತೆ ಭಾರತ ಘರ್ಜಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.