ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದ ಮೋದಿ ಘೋಷಣೆ 8 ವರ್ಷವಾದರೂ ಈಡೇರಿಲ್ಲ

ಮೈಸೂರು: ‘ಮೈಸೂರನ್ನು ‍ಪ್ಯಾರಿಸ್ ಮಾಡುವುದಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಕಳೆದ 8 ವರ್ಷಗಳಲ್ಲಿ ಏನೂ ಮಾಡದಿರುವುದನ್ನು ಎತ್ತಿ ತೋರಿಸುತ್ತದೆ. ಇದನ್ನು ಖಂಡಿಸಿ ಎಡ ‍ಪಕ್ಷಗಳು, ದಲಿತ, ರೈತ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಜೂನ್‌ 19ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್‌.ಬಿ. ರಾಮಕೃಷ್ಣ ‘ಸಾಂಸ್ಕೃತಿಕ ನಗರಿಯನ್ನು ಪ್ಯಾರಿಸ್ ಮಾದರಿಯ ನಗರ ಮಾಡುವ ನಿಟ್ಟಿನಲ್ಲಿ ಎಷ್ಟು ಹಣ ನೀಡಿದ್ದಾರೆ, ಯಾವ ಯೋಜನೆಗಳನ್ನು ರೂಪಿಸಿದರು ಎಂದು ಪ್ರಕಟಿಸಬೇಕು. ಜೂನ್‌ 20 ಹಾಗೂ 21ರಂದು ಮೈಸೂರು ಪ್ರವಾಸ ಕೈಗೊಂಡಿರುವ ಪ್ರಧಾನಿಯು ಸಾರ್ವಜನಿಕರಿಗೆ ಲೆಕ್ಕ ಕೊಡಬೇಕು’ ಎಂದರು.

ಪ್ರವಾಸಿ ತಾಣವಾದ ಮೈಸೂರಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಬಿಜೆಪಿ ಸರ್ಕಾರದ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಎಚ್‌.ಬಿ.ರಾಮಕೃಷ್ಣ ಅವರು, ಕೈಗಾರಿಕೆ ಮತ್ತು ಉದ್ಯೋಗ ಅವಕಾಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮೈಸೂರು–ಕುಶಾಲನಗರ, ಮೈಸೂರು–ಮೆಟ್ಟಿಪಾಳ್ಯಂ ಹಾಗೂ ನಂಜನಗೂಡು–ನೀಲಂಬೂರು ರೈಲು ಮಾರ್ಗ ಯೋಜನೆಗಳ ಪ್ರಗತಿಯ ಸ್ಥಿತಿಗತಿಗಳನ್ನು ಜನರಿಗೆ ತಿಳಿಸಬೇಕು. ಮೈಸೂರಿನಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಬಾರದು. ಲಲಿತಮಹಲ್‌ ಅರಮನೆ ಸೇರಿದಂತೆ ಯಾವುದೂ ಈ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡಿಲ್ಲ’ ಎಂದರು.

‘ಯುವಕರಿಗೆ ಮೋಸ ಮಾಡಿ, ಬೆಣ್ಣೆ ಹಚ್ಚುವ ಕೆಲಸ ಮುಂದಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ಅಗ್ನಿಪಥ್‌ ಯೋಜನೆ ಜಾರಿಗೊಳಿಸಿದೆ. ಅದೇ ರೀತಿ, ಕಾರ್ಮಿಕರನ್ನು ಶೋಷಿಸುವ 4 ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು. ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧಗೊಳಿಸಬೇಕು. ವಿದ್ಯುತ್ ಖಾಸಗೀಕರಣ ಪ್ರಸ್ತಾವದಿಂದ ಹಿಂದೆ ಸರಿಯಬೇಕು. ಪೆಟ್ರೋಲ್‌, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ, ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಜಗದೀಶ ಸೂರ್ಯ, ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ರವಿ, ಸಿಪಿಐ(ಎಂಎಲ್) ಜಿಲ್ಲಾ ಸಮಿತಿ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ ಮತ್ತು ಐಎನ್‌ಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಅನಿಲ್‌ಕುಮಾರ್‌ ಇದ್ದರು.

Donate Janashakthi Media

Leave a Reply

Your email address will not be published. Required fields are marked *