ಯುವತಿಯರಿಬ್ಬರ ಬೆತ್ತಲೆ ಮೆರವಣಿಗೆ ವಿಡಿಯೊಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾದ ನಂತರ ಮೋದಿ ಹಿಂಸಾಚಾರ ವಿರುದ್ಧ ಮೌನ ಮುರಿದಿದ್ದಾರೆ
ದೆಹಲಿ: ಮಣಿಪುರದಲ್ಲಿ ಹಿಂಸಾಚಾರ (Manipur Violence) ಪ್ರಾರಂಭವಾಗಿ ಸುಮಾರು 79 ದಿನಗಳ ನಂತರ ಪ್ರಧಾನಿ ಮೋದಿ (PM Modi) ತಮ್ಮ ಮೌನ ಮುರಿದ್ದಾರೆ. ಬುಧವಾರ ಯುವತಿಯರಿಬ್ಬರನ್ನು ಬೆತ್ತಲೆ ಮೆರವಣಿಗೆ (Women paraded naked ) ಮಾಡಿ ಅವರಿಗೆ ಕಿರಿಕುಳ ನೀಡುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ವಿಶ್ವದಾದ್ಯಂತ ತಲ್ಲಣ ಉಂಟುಮಾಡಿದ್ದು, ಅದರ ನಂತರ ಅವುಗಳ ವಿಚಾರವಾಗಿ ಮೋದಿ ಮಾತನಾಡಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ 140 ಕೋಟಿ ಭಾರತೀಯರನ್ನು ನಾಚಿಕೆಪಡುವಂತೆ ಮಾಡಿದ್ದು, ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು ಸುಮಾರು ಮೂರು ತಿಂಗಳಾಗುತ್ತಾ ಬರುತ್ತಿವೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ
ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದ ಕುರಿತು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಪ್ರಧಾನಿ ಮೋದಿ, ಕಾನೂನು ತನ್ನ ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. “ಈ ರೀತಿಯ ಘಟನೆಯು ರಾಜಸ್ಥಾನ, ಛತ್ತೀಸ್ಗಢ ಅಥವಾ ಮಣಿಪುರಲ್ಲಿ ನಡೆದಿರಬಹುದು. ಅಪರಾಧಿ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ. ಮಣಿಪುರದಲ್ಲಿ ನಡೆದ ಘಟನೆಯು ಯಾವುದೇ ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ತಮ್ಮ ವಾಡಿಕೆ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಮಾನಸಿಕ ಅಸ್ವಸ್ಥ ಮಹಿಳೆಯನ್ನು ಗುಂಡಿಕ್ಕಿ ಕೊಂದು ಆಕೆಯ ದೇಹವನ್ನು ಶಾಲೆಯ ಹೊರಗೆ ಎಸೆದಿದ್ದರು. 2023ರ ಮೇ 3ರಂದು ಮಣಿಪುರ ಹಿಂಸಾಚಾರ ಪ್ರಾರಂಭವಾದಾಗಿನಿಂದ ಸುಮಾರು 120 ಸಾವು ನೋವುಗಳು ವರದಿಯಾಗಿವೆ.
#WATCH | Prime Minister Narendra Modi says, "…I assure the nation, no guilty will be spared. Law will take its course with all its might. What happened with the daughters of Manipur can never be forgiven." pic.twitter.com/HhVf220iKV
— ANI (@ANI) July 20, 2023
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡೇಟಿಗೆ ಮಹಿಳೆ ಸಾವು
ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮಹಿಳೆಯರ ಸುರಕ್ಷತೆಗಾಗಿ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಎಲ್ಲಾ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
“ರಾಜಸ್ಥಾನ, ಮಣಿಪುರ ಅಥವಾ ಛತ್ತೀಸ್‌ಗಢ ಆಗಿರಲಿ, ನಮ್ಮ ಎಲ್ಲಾ ಮಹಿಳೆಯರನ್ನು ರಕ್ಷಿಸುವಂತೆ ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಮಹಿಳೆಯರನ್ನು ರಕ್ಷಿಸಲು ನಾವು ರಾಜಕೀಯ ಮೀರಿ ಕೆಲಸ ಮಾಡಬೇಕು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ನಿರಂತರವಾಗಿ ಟೀಕೆ ಮಾಡುತ್ತಿವೆ.
ಯುವತಿಯರ ಬೆತ್ತಲೆ ಮೆರವಣಿಗೆ
ಮಣಿಪುರದಲ್ಲಿ ಇಬ್ಬರು ಯುವತಿರನ್ನು ಬೆತ್ತಲೆ ಮೆರವಣಿಗೆ ಮಾಡಿದ ಎರಡು ತಿಂಗಳ ಹಳೆಯ ವಿಡಿಯೋ ಬುಧವಾರ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯು ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಮರುದಿನ (ಮೇ 4 ರಂದು ) ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮೇ 4ರ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೆರಾದಾಸ್ (32) ಎಂದು ಗುರುತಿಸಲಾಗಿದೆ, ವಿಡಿಯೊದಲ್ಲಿ ದುಷ್ಕರ್ಮಿ ಹಸಿರು ಟಿ-ಶರ್ಟ್ ಧರಿಸಿದ್ದು ದಾಖಲಾಗಿದ್ದು, ವಿಡಿಯೊ ಸಹಾಯದಿಂದ ತೌಬಲ್ ಜಿಲ್ಲೆಯಿಂದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಮುಖ್ಯಮಂತ್ರಿ ಬಿರೆನ್ ಸಿಂಗ್ ದೃಢಪಡಿಸಿದ್ದಾರೆ.
ಈ ನಡುವೆ ಒಕ್ಕೂಟ ಸರ್ಕಾರ ಮಹಿಳೆಯರ ವಿಡಿಯೊವನ್ನು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚದಂತೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಫ್ರಾನ್ಸ್ ಪ್ರವಾಸದಲ್ಲಿ ಮೋದಿ | ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲಿರುವ EU!
‘ಘೋರ ಸಾಂವಿಧಾನಿಕ ನಿಂದನೆ’
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಪುರುಷರು ರಸ್ತೆಯೊಂದರಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಕುರಿತು ಕಳವಳ ವ್ಯಕ್ತಪಡಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. “ಘಟನೆಯು ಸರಳವಾಗಿಲ್ಲ ಮತ್ತು ಸ್ವೀಕಾರಾರ್ಹವಲ್ಲ” ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದು, ಯಾವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್‌ಗೆ ತಿಳಿಸುವಂತೆ ಸೂಚಿಸಿದೆ.
“ನಾವು ಕಾರ್ಯನಿರ್ವಹಿಸಲು ಸರ್ಕಾರಕ್ಕೆ ಸ್ವಲ್ಪ ಸಮಯ ನೀಡುತ್ತೇವೆ. ಏನೂ ಆಗದಿದ್ದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾಗಿ 3 ತಿಂಗಳುಗಳಾಗುತ್ತಿದ್ದು, ಇದುವರೆಗೂ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಣಿಪುರದ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತಿದೆ.
ಇದನ್ನೂ ಓದಿ: ಮಣಿಪುರ : ಶಾಂತಿ ಮತ್ತು ಸಹಜಸ್ಥಿತಿಯ ಮರುಸ್ಥಾಪನೆ ತಕ್ಷಣದ ಗುರಿಯಾಗಬೇಕು
ವಿಡಿಯೊ ನೋಡಿ: ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್ ಇಂಜಿನ್ ಸರ್ಕಾರ!