ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶವು ನಿನ್ನೆ ಹೊರಬಿದ್ದಿದ್ದು, ಚುನಾವಣೆ ಫಲಿತಾಂಶದಿಂದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ನಿರಾಶೆಯಾಗಿದೆ ಎನ್ನಲಾಗುತ್ತಿದೆ.
ಚಿಂತಕರ ಚಾವಡಿ, ಮೇಲ್ಮನೆ ಎಂಬೆಲ್ಲಾ ಗುಣವಿಶೇಷಗಳನ್ನು ಪಡೆದುಕೊಂಡಿರುವ ವಿಧಾನ ಪರಿಷತ್ ರದ್ದಾಗಬೇಕೆಂಬ ವಿಚಾರಗಳು ಕೇಳಿ ಬರುತ್ತಿವೆ.
ಅತ್ಯುತ್ತಮ ಪ್ರಜಾಪ್ರಭುತ್ವದಡಿ ಜಾರಿಗೆ ತಂದಿರುವ ವಿಧಾನ ಪರಿಷತ್ತಿನ ಸಹವಾಸವೇ ಬೇಡಾವೆಂದು ಸ್ವತಃ ಮೇಲ್ಮನೆ ಸದಸ್ಯರು ವಿಷಾಧ ವ್ಯಕ್ತಪಡಿಸುತ್ತಿದ್ದಾರೆ. ನೆನ್ನೆ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದರೆ, ಇಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ವಿಧಾನ ಪರಿಷತ್ ರದ್ದಾಗಬೇಕು ಎಂದು ಹೇಳಿಕೆ ನೀಡಿದ್ದಾರೆ.
ಲಕ್ಷ್ಮಣ ಸವದಿ ಅವರು ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಪರಿಷತ್ತಿನ ಚುನಾವಣಾ ಫಲಿತಾಂಶ ನೋಡಿದರೆ ಪರಿಷತ್ ಇರೋವುದರಲ್ಲಿ ಅರ್ಥವಿಲ್ಲ. ಇಡೀ ರಾಜ್ಯದ ಚುನಾವಣೆ ನೋಡಿದರೆ ನಂಗೆ ಹೀಗೆ ಅನಿಸುತ್ತಿದೆ. ದುಡ್ಡಿನ ರಾಜಕಾರಣ ಆಗ್ತಿದೆ, ಅದೂ ಸಹ ಓಪನ್ ಸಿಕ್ರೇಟ್ ಆಗಿ. ಈ ವ್ಯವಸ್ಥೆಯಲ್ಲಿ ಪರಿಷತ್ ಇರೋದು ಯಾವ ಪುರುಷಾರ್ಥಕ್ಕೆ? ನಾವೆಲ್ಲ ಜನರ ದೃಷ್ಟಿಯಲ್ಲಿ ಅವಮಾನಿತರಾಗ್ತಿದ್ದೀವಿ. ಸ್ವತಃ ಒರ್ವ ಪರಿಷತ್ ಸದಸ್ಯನಾಗಿ ಹೇಳ್ತಿದ್ದೀನಿ ಪರಿಷತ್ ರದ್ದಾಗಬೇಕು ಎಂದು ಹೇಳಿಕೆ ನೀಡಿದ್ದಾರೆ.
ಚಿಂತಕರ ಚಾವಡಿ ಶ್ರೀಮಂತರ ಚಾವಡಿ
ಚಿಂತಕರ ಚಾವಡಿ ಶ್ರೀಮಂತರ ಚಾವಡಿ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ನೆನ್ನೆ ಬೇಸರ ವ್ಯಕ್ತಪಡಿಸಿದರು. ಎಲ್ಲ ರಾಜಕೀಯ ಪಕ್ಷದವರು ಚಿಂತನೆ ಮಾಡಿ ವಿಧಾನ ಪರಿಷತ್ ಬೇಕೋ ಬೇಡವೋ ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಬೇಕು ಎಂದು ಅವರು ಹೇಳಿದರು.
ಒಂದೊಂದು ಚುನಾವಣೆಗೆ ಒಂದೊಂದು ರೂಪ ಇರುತ್ತದೆ. ಪರಿಷತ್ ಚುನಾವಣೆ ಗಮನಿಸಿದಾಗ, ಪ್ರಜಾಪ್ರಭುತ್ವಕ್ಕೆ ಅಪಮಾನದ ರೀತಿಯಲ್ಲಿ ನಡೆದಿದೆ. ಅಭ್ಯರ್ಥಿಗಳು ಪಕ್ಷದ ವಿಚಾರ, ಸಾಧನೆ ಬಗ್ಗೆ ಹೇಳದೆ, ನೀನು ಎಷ್ಟು ದುಡ್ಡು ಕೊಡ್ತಿಯಾ? ನಾನು ಇಷ್ಟು ಕೊಡುತ್ತೇನೆ ಎನ್ನುತ್ತಾರೆ. ಇಷ್ಟು ಕೆಟ್ಟದಾಗಿ ನಡೆದ ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು.