ಇದೇ ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸಿದ ಪಾರ್ಕರ್​ ಸೋಲಾರ್​ ಪ್ರೋಬ್​

ವಾಷಿಂಗ್ಟನ್​: ನಾಸಾದ ಬಾಹ್ಯಾಕಾಶ ನೌಕೆಯೊಂದು ಅಧಿಕೃತವಾಗಿ ಸೂರ್ಯನನ್ನು ಸ್ಪರ್ಶಿಸುವ ಮೂಲಕ ವಿಜ್ಞಾನ ಲೋಕದಲ್ಲಿ ಹೊಸದೊಂದು ಇತಿಹಾಸವನ್ನು ನಿರ್ಮಿಸಿದೆ. ಇದುವರೆಗೂ ಅನ್ವೇಷಿಸಲಾಗದ ಸೂರ್ಯನ ಹೊರಭಾಗದ ವಾತಾವರಣ ಮೂಲಕ ನೌಕೆಯು ಸೂರ್ಯನತ್ತ ಧುಮಿಕಿರುವುದಾಗಿ ಅಮೆರಿಕನ್​ ಜಿಯೋಫಿಸಿಕಲ್​ ಯೂನಿಯನ್ ಸಭೆಯಲ್ಲಿ ವಿಜ್ಞಾನಿಗಳು ಮಂಗಳವಾರ ದೃಢಪಡಿಸಿದ್ದಾರೆ.

ಪಾರ್ಕರ್​ ಸೋಲಾರ್​ ಪ್ರೋಬ್​ ನೌಕೆಯು ಕಳೆದ ಏಪ್ರಿಲ್​ ತಿಂಗಳಿನಲ್ಲಿ ಕರೊನಾ ಮೂಲಕ ಹಾರಾಟ ಆರಂಭಿಸಿತು. ನೌಕೆಯು ಡಾಟಾವನ್ನು ಪಡೆಯಲು ಕೆಲವು ತಿಂಗಳುಗಳು ತೆಗೆದುಕೊಂಡಿತು ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಇನ್ನಷ್ಟು ತಿಂಗಳು ಸಮಯ ತೆಗೆದುಕೊಂಡಿತು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಈ ಐತಿಹಾಸಿಕ ಕ್ಷಣದ ಬಗ್ಗೆ ಜಾನ್ಸ್​ ಹಾಪ್​ಕಿನ್ಸ್​ ಯೂನಿವರ್ಸಿಟಿಯ ಪಾರ್ಕರ್​ ಸೋಲಾರ್​ ಪ್ರೋಬ್​ ಪ್ರಾಜೆಕ್ಟ್​ ವಿಜ್ಞಾನಿ ನೌರ್ ರವೂಫಿ ಮಾತನಾಡಿದ್ದು, ತುಂಬಾ ರೋಮಾಂಚನಕಾರಿಯಾದ ಉತ್ಸಾಹ ಭರಿತ ಸುದ್ದಿ ಎಂದು ಬಣ್ಣಿಸಿದ್ದಾರೆ.

ಸೂರ್ಯನಿಗೆ ಘನ ಮೇಲ್ಮೈ ಎಂಬುದು ಇರುವುದಿಲ್ಲ. ಸೂರ್ಯನ ಹೊರಭಾಗದ ವಾತವಾರಣ ಎನಿಸಿಕೊಂಡ ಕರೊನಾ ಅಧ್ಯಯನಕ್ಕೆ ತುಂಬಾ ಮುಖ್ಯವಾಗಿದೆ. ಕಾಂತೀಯವಾಗಿ ಹೆಚ್ಚು ತೀವ್ರತೆಯನ್ನು ಹೊಂದಿರುವ ಈ ವಲಯವನ್ನು ಅನ್ವೇಷಿಸುವ ಮೂಲಕ ಭೂಮಿಯ ಮೇಲಿನ ಸುಗಮ ಜೀವನಕ್ಕೆ ಅಡ್ಡಿಯಾಗಬಹುದಾದ ಸೌರ ಸ್ಫೋಟಗಳ ಬಗ್ಗೆ ಉತ್ತಮವಾಗಿ ತಿಳಿದುಕೊಳ್ಳಲು ವಿಜ್ಞಾನಿಗಳಿಗೆ ಸಹಕಾರಿಯಾಗಲಿದೆ ಎಂಬುದು ಇದರ ವಿಶೇಷವಾಗಿದೆ.

ಪಾರ್ಕರ್​ ಸೋಲಾರ್​ ಪ್ರೋಬ್​ ನೌಕೆಯನ್ನು 2018ರಲ್ಲಿ ಭೂಮಿಯಿಂದ ಉಡಾವಣೆ ಮಾಡಲಾಯಿತು. ಸೋಲಾರ್​ ವಾತಾವರಣ ಮತ್ತು ಹೊರ ಹೋಗುವ ಸೌರ ಗಾಳಿಯ ನಡುವಿನ ಮೊನೆಚಾದ ಹಾಗೂ ಅಸಮತೋಲನ ಗಡಿಯನ್ನು ಮೊದಲು ದಾಟಿದಾಗ ಪಾರ್ಕರ್​ ನೌಕೆಯು ಸೂರ್ಯನ ಮಧ್ಯಭಾಗದಿಂದ 8 ಮಿಲಿಯನ್​ ಮೈಲಿಗಳ ದೂರದಲ್ಲಿತ್ತು. ಸುಮಾರು ಮೂರು ಬಾರಿ ಕರೊನಾ ಪ್ರದೇಶವನ್ನು ಒಳಗೆ-ಹೊರಗೆ ಮಾಡಿರುವ ನೌಕೆ, ಪ್ರತಿ ಬಾರಿಯು ಯಾವುದೇ ಅಡಚಣೆಯಿಲ್ಲದೇ ನಯವಾಗಿ ದಾಟಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕರೊನಾ ವಲಯ ನಿರೀಕ್ಷೆಗಿಂತ ಹೆಚ್ಚಿನ ಧೂಳುಮಯವಾಗಿತ್ತು ಎಂದು ನೌರ್ ರವೂಫಿ ತಿಳಿಸಿದ್ದಾರೆ. ಮುಂದಿನ ಕರೊನಾ ತಿರುಗಾಟವೂ ಸೌರ ಗಾಳಿಯ ಉತ್ಪತಿಯ ಬಗ್ಗೆ ಉತ್ತಮವಾಗಿ ತಿಳಿಯಲು ವಿಜ್ಞಾನಿಗಳಿಗೆ ನೆರವಾಗಲಿದೆ. ಸೌರ ಗಾಳಿ ಹೇಗೆ ಬಿಸಿಯಾಗುತ್ತದೆ ಮತ್ತು ಬಾಹ್ಯಾಕಾಶದಿಂದ ಹೇಗೆ ಹೊರ ಹೊಮ್ಮುತ್ತದೆ ಎಂಬುದನ್ನು ತಿಳಿಯಲು ಕೂಡ ನೆರವಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಾಥಮಿಕ ಮಾಹಿತಿಯ ಪ್ರಕಾರ ಆಗಸ್ಟ್​ ತಿಂಗಳಲ್ಲಿ ಸೂರ್ಯನ ಕರೊನಾ ವಲಯವನ್ನು 9ನೇ ಬಾರಿ ಸಂಪರ್ಕಕಿಸಿರುವ ನೌಕೆ, ಕಳೆದ ತಿಂಗಳಷ್ಟೇ 10ನೇ ಬಾರಿ ಮುಟ್ಟಿದ್ದು, 2025ರಲ್ಲಿ ಕೊನೆಯ ಕಕ್ಷೆಯವರೆಗೆ ಸೂರ್ಯನಿಗೆ ಹತ್ತಿರವಾಗುತ್ತಲೇ ಇರುತ್ತದೆ ಮತ್ತು ಕರೊನಾಗೆ ಆಳವಾಗಿ ಧುಮುಕುತ್ತದೆ.

Donate Janashakthi Media

Leave a Reply

Your email address will not be published. Required fields are marked *