ಬೆಂಗಳೂರು: ಮೇಕೆದಾಟು ಯೋಜನೆಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಮಾಡಿಲ್ಲವೆಂದು ರಾಷ್ಟ್ರೀಯ ಹಸಿರು ಪೀಠಕ್ಕೆ (ಎನ್‌ಜಿಟಿ) ಸರಕಾರವು ಮನವರಿಕೆ ಕೊಟ್ಟಿದೆ ಎಂದು ಕಾನೂನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೇಕೆದಾಟು ವಿಚಾರವಾಗಿ ಒಂದು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡ ಚೆನ್ನೈ ಎನ್.ಜಿ.ಟಿ ಕೋರ್ಟ್ ವಿಚಾರಣೆ ನಡೆಸಿತು. ಈಗ ರಾಷ್ಟ್ರೀಯ ಎನ್.ಜಿ.ಟಿ ವ್ಯಾಪ್ತಿಯಲ್ಲಿ ಪ್ರಕರಣ ಇದೆ. ಮೇಕೆದಾಟು ವಿಷಯದಲ್ಲಿ ಕರ್ನಾಟಕ ಕುರಿತಾದ ಒಂದು ಮುಖ್ಯ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ಅಲ್ಲಿ ಕೂಡ ಕರ್ನಾಟಕದ ಹಿತಾಸಕ್ತಿ ಕಾಪಾಡುವ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇದನ್ನು ಓದಿ: ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು: ಹೆಚ್ ಡಿ ಕುಮಾರಸ್ವಾಮಿ
ಕಾನೂನು ಇಲಾಖೆ , ಅಡ್ವೋಕೇಟ್ ಜನರಲ್ ಹಾಗೂ ಕಾನೂನು ತಜ್ಞರ ತಂಡ ಕೂಲಂಕಶ ಚರ್ಚೆ ಮಾಡಲಾಗಿತ್ತು. ಇದನ್ನು ನವದೆಹಲಿಯ ಎನ್‌ಜಿಟಿ ಪೀಠದ ಮುಂದೆ ಮಂಡಿಸಲಾಯಿತು.
ನಮ್ಮ ಸರ್ಕಾರ ನೆಲ-ಜಲದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿದೆ ‘ಮೇಕೆದಾಟು ವಿಷಯದಲ್ಲಿ ರಾಜ್ಯದ ವಾದವನ್ನು ಮನ್ನಿಸಿದ ಎನ್‌ಜಿಟಿ ಈ ಕುರಿತ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಶೀಘ್ರದಲ್ಲಿ ಎಲ್ಲ ಅನುಮತಿ ಪಡೆದು ಯೋಜನೆ ಪ್ರಾರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.