ಬೆಂಗಳೂರು: ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಹಾಗೂ ಸರ್ಕಾರದ ಕ್ರಮವನ್ನು ಖಂಡಿಸಿ ಜುಲೈ 8ರಂದು ಬೆಂಗಳೂರು ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ಘೋಷಿಸಿದೆ.
ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ (AICCTU), ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ, ನವ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ (CITU), ಕರ್ನಾಟಕ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾಮಂಡಳ ಹಾಗೂ ಕರ್ನಾಟಕ ಮಹಿಳಾ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಮುಖಂಡರು ಜುಲೈ 6ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಸಂಘಟನೆಗಳ ಮುಖಂಡರು ಮಾತನಾಡಿ, ಬೀದಿ ವ್ಯಾಪಾರಿಗಳ ವಿರುದ್ಧ ನಡೆಯುತ್ತಿರುವ ಎತ್ತಂಗಡಿ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ–2014 ಅನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ‘ಇಲ್ಲಿ ಆರಂಭ… ಇಲ್ಲಿಯೇ ಅಂತ್ಯ’: ನೇಮಾರ್ ಅಂತರರಾಷ್ಟ್ರೀಯ ನಿವೃತ್ತಿ ಸುಳಿವು
ಬೆಂಗಳೂರು ನಗರದಲ್ಲಿ ಸುಮಾರು 1.5 ಲಕ್ಷ ಬೀದಿ ವ್ಯಾಪಾರಿಗಳಿದ್ದು, ಅವರಲ್ಲಿ 80 ಸಾವಿರ ಮಂದಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ನೀಡಲಾಗಿದೆ. ಆದರೆ ಇತ್ತೀಚಿನ ಸಮೀಕ್ಷೆಯಲ್ಲಿ ಕೇವಲ 34 ಸಾವಿರ ವ್ಯಾಪಾರಿಗಳನ್ನು ಮಾತ್ರ ಗುರುತಿಸಲಾಗಿದ್ದು, ಸಾವಿರಾರು ಮಂದಿ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಎಲ್ಲರಿಗೂ ಗುರುತಿನ ಚೀಟಿಯನ್ನೂ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದೂರಿದರು.
ಮುಖ್ಯ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಮೌಖಿಕ ಆದೇಶದ ಆಧಾರದಲ್ಲಿ ಜೆಸಿಬಿ ಬಳಸಿ ಗಾಡಿಗಳು, ಸರಕುಗಳನ್ನು ಜಪ್ತಿ ಮಾಡುವುದು ಹಾಗೂ ವ್ಯಾಪಾರಕ್ಕೆ ಅಡ್ಡಿಪಡಿಸುವುದು ಸಂಪೂರ್ಣ ಕಾನೂನುಬಾಹಿರ ಎಂದು ಸಮಿತಿ ಆರೋಪಿಸಿತು.
ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಸಮಿತಿ, ಮುಖ್ಯ ರಸ್ತೆಗಳಲ್ಲಿ ಉಚಿತ ವಾಹನ ನಿಲುಗಡೆಗೆ ಅವಕಾಶ ನೀಡಿರುವಾಗ ಬೀದಿ ವ್ಯಾಪಾರಿಗಳನ್ನು ಮಾತ್ರ ಗುರಿಯಾಗಿಸಿರುವುದು ಏಕೆ ಎಂದು ಪ್ರಶ್ನಿಸಿತು. ಪಾದಚಾರಿ ಮಾರ್ಗಗಳ ಅತಿಕ್ರಮಣಕ್ಕೆ ಅಕ್ರಮ ವಾಹನ ನಿಲುಗಡೆ, ಖಾಸಗಿ ತೋಟಗಳು, ಟ್ರಾನ್ಸ್‌ಫಾರ್ಮರ್‌ಗಳು, ಅಂಗಡಿ ಹಾಗೂ ಹೋಟೆಲ್‌ಗಳ ವಿಸ್ತರಣೆ ಪ್ರಮುಖ ಕಾರಣಗಳಾಗಿದ್ದು, ಬಡ ಬೀದಿ ವ್ಯಾಪಾರಿಗಳನ್ನು ಮಾತ್ರ ಸುಲಭ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಲಾಯಿತು.
ಬೀದಿ ವ್ಯಾಪಾರಿಗಳ ಕಾಯ್ದೆಯ ಪ್ರಕಾರ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ತೆರವು ಮಾಡಬಾರದು, 30 ದಿನಗಳ ಲಿಖಿತ ನೋಟಿಸ್ ನೀಡುವುದು ಕಡ್ಡಾಯ ಹಾಗೂ ಪಟ್ಟಣ ವ್ಯಾಪಾರ ಸಮಿತಿಯ ಅನುಮತಿ ಇಲ್ಲದೆ ‘ನೋ-ವೆಂಡಿಂಗ್ ಝೋನ್’ ಘೋಷಿಸಲಾಗುವುದಿಲ್ಲ. ಆದರೆ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಜಯನಗರ, ವಿಜಯನಗರ, ಮಾರತಹಳ್ಳಿ, ಮಲ್ಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ ಎಂದು ಸಮಿತಿ ಆರೋಪಿಸಿತು.
ಜುಲೈ 8ರಂದು ಬೆಂಗಳೂರು ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಮಿತಿ ತಿಳಿಸಿದೆ.
ಸರ್ಕಾರಕ್ಕೆ ಸಲ್ಲಿಸಿರುವ ಪ್ರಮುಖ ಬೇಡಿಕೆಗಳಲ್ಲಿ, ತೆರವುಗೊಳಿಸಿರುವ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಅಥವಾ ಪರ್ಯಾಯ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವುದು, ಜಪ್ತಿ ಮಾಡಿದ ಸಾಮಗ್ರಿಗಳನ್ನು ಹಿಂತಿರುಗಿಸುವುದು, ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣ ಜಾರಿಗೊಳಿಸುವುದು, ಸಮಗ್ರ ಸಮೀಕ್ಷೆ ನಡೆಸಿ ಗುರುತಿನ ಚೀಟಿಗಳನ್ನು ವಿತರಿಸುವುದು, ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ ಬಲಪಡಿಸುವುದು, ಪಾದಚಾರಿ ಮಾರ್ಗಗಳನ್ನು ವಿಸ್ತರಿಸುವುದು ಹಾಗೂ ನಿಜವಾದ ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿವೆ.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವ ಜಿಬಿಎ? ಬದುಕಿನ ಹಕ್ಕಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ!
