ನವದೆಹಲಿ: ಬಾಕ್ಸರ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಈ ಬಾರಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಗಳಾಗಿ ಭಾಗಿಯಾಗಲಿದ್ದಾರೆ. ಇಬ್ಬರೂ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹಿಡಿಯಲಿದ್ದಾರೆ ಮತ್ತು ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿ ಭಾಗಿಯಾಗಲಿದ್ದಾರೆ. ಎಂದು ಐಒಎ ಮಾಹಿತಿ ನೀಡಿದೆ.
ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಗೆ ಧ್ವಜಧಾರಿಗಳ ಮಾಹಿತಿಯನ್ನು ನೀಡಿದೆ.
ಲಿಂಗ ಸಮಾನತೆ ಸಾರುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ತಲಾ ಒಬ್ಬ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗೆ ಭಾರತದ ಧ್ವಜಧಾರಿಯ ಗೌರವ ನೀಡಲಾಗಿದೆ. ಇತ್ತೀಚೆಗೆ ಈ ಕುರಿತು ಐಒಎ ಅಧ್ಯಕ್ಷರಾದ ನರಿಂದರ್ ಬಾತ್ರಾ ಸುಳಿವು ನೀಡಿದ್ದರು.
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರು “ಇದು ನನ್ನ ಕೊನೆಯ ಒಲಿಂಪಿಕ್ಸ್ ಪಂದ್ಯವಾಗಲಿದೆ. ಇದೊಂದು ದೊಡ್ಡ ಅವಕಾಶವೂ ಹೌದು. ಉದ್ಘಾಟನಾ ಸಮಾರಂಭದಲ್ಲಿ ತಂಡವನ್ನು ಮುನ್ನಡೆಸುವ ಈ ಅವಕಾಶವನ್ನು ಪಡೆದುಕೊಂಡಿದ್ದಕ್ಕೆ ನನಗೆ ತುಂಬಾ ಸಂತಸವನ್ನು ತಂದಿದೆ ಹಾಗೂ ಇದಕ್ಕಾಗಿ ನನ್ನನ್ನು ಆಯ್ಕೆ ಮಾಡಿದ ಕ್ರೀಡಾ ಸಚಿವಾಲಯ ಮತ್ತು ಐಒಎಗೆ ಧನ್ಯವಾದ ಅರ್ಪಿಸುತ್ತೇನೆ. ಪದಕವನ್ನು ಗೆಲ್ಲಲ್ಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತೇನೆʼʼ ಎಂದು ಹೇಳಿದರು.
ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಭಾರತದ ಏಕೈಕ ಅಥ್ಲೀಟ್ ಅಭಿನವ್ ಬಿಂದ್ರಾ ಅವರು 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿದ್ದರು. ಈ ಬಾರಿಯ ಟೋಕಿಯೊ ಕ್ರೀಡಾಕೂಟವು ಜುಲೈ 23ರಿಂದ ನಿಗದಿಯಾಗಿದ್ದು, ಆಗಸ್ಟ್ 8ರಂದು ಕೊನೆಗೊಳ್ಳಲಿದೆ. ಭಾರತದ 100ಕ್ಕೂ ಹೆಚ್ಚು ಅಥ್ಲೀಟ್‌ಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ.
ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಕಾರ್ಯನಿರ್ವಾಹಕ ಮಂಡಳಿಯು ಸಹ ಮೊದಲ ಬಾರಿಗೆ – 206 ತಂಡಗಳಲ್ಲಿ ಕನಿಷ್ಠ ಒಂದು ಮಹಿಳಾ ಮತ್ತು ಒಬ್ಬ ಪುರುಷ ಕ್ರೀಡಾಪಟು ಮತ್ತು ನಿರಾಶ್ರಿತರ ಒಲಿಂಪಿಕ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ನಿರ್ಧರಿಸಿತು.