ಬೆಂಗಳೂರು: ಮಾರ್ಷಲ್‌ಗಳು, ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಸಣ್ಣ ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಹೋಟೆಲ್ ಮಾಲೀಕರಿಗೆ ಸಮಸ್ಯೆ ನೀಡುತ್ತಿದ್ದಾರೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ದೂರಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರಿಗೆ ಸಂಘದ ವತಿಯಿಂದ ಪತ್ರ ಬರೆಯಲಾಗಿದೆ.
‘ಮಾರ್ಷಲ್‌ಗಳು ಇತ್ತೀಚೆಗೆ ಸಣ್ಣಪುಟ್ಟ ಹೋಟೆಲ್‌ಗಳಿಗೆ ಬಂದು ತೊಂದರೆ ನೀಡುತ್ತಿದ್ದಾರೆ. ಮಲ್ಲೇಶ್ವರದ ಹೋಟೆಲ್‌ವೊಂದರಲ್ಲಿ ಕಸದ ಬುಟ್ಟಿಯಲ್ಲಿದ್ದ ಪ್ಲಾಸ್ಟಿಕ್ ತುಣುಕನ್ನು ತೋರಿಸಿ, ₹ 5 ಸಾವಿರ ದಂಡ ಹಾಕಿದ್ದಾರೆ. ಬಳಿಕ ಹೋಟೆಲ್‌ನ ಪರವಾನಗಿ ರದ್ದು ಮಾಡುವುದಾಗಿ ಹೆದರಿಸಿದ್ದಾರೆ. ಕೋವಿಡ್ ಹೆಸರಿನಲ್ಲಿ ಮಾರ್ಷಲ್‌ಗಳ ವರ್ತನೆ ಮಿತಿ ಮೀರಿದೆ’ ಎಂದು ಪಿ.ಸಿ.ರಾವ್ ಆರೋಪಿಸಿದ್ದಾರೆ.
‘ರಾಜಕೀಯ ಮುಖಂಡರ ಸಭೆಗಳು ಹಾಗೂ ಮುಷ್ಕರಗಳು ನಡೆದಾಗ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೂ ಅವುಗಳನ್ನು ದಂಡಿಸುವ ಕೆಲಸ ನಡೆಯಲಿಲ್ಲ. ಸರ್ಕಾರದ ಸೂಚಿಸಿರುವ ನಿಯಮ ಪಾಲಿಸುತ್ತ ಕೈಜೋಡಿಸಿದ್ದರೂ ಹೋಟೆಲ್ ಮಾಲೀಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಪಾಲಿಕೆ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.