ಮಣಿಪುರನಲ್ಲಿ ನಡೆದ ಹಿಂಸಾಚಾರದ ವೇಳೆ ಕುಕಿ-ಜೋ ಸಮುದಾಯದ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಬಧುವಾರ ವೈರಲ್ ಆಗಿದೆ. ಈ ಘಟನೆಗೆ ದೇಶಾದ್ಯಂತ ಭಾರೀ ಅಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ಪಾತಕಿ ಘಟನೆಯನ್ನು ಖಂಡಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಕಾವ್ಯದ ಮೂಲಕ ಪ್ರತಿರೋಧ ಹೊರಹಾಕಿದ್ದಾರೆ.
ಕಾವ್ಯ – 01
* ನಾ ತಾಯಿ
ಈ ದೇಹದ ಬಟ್ಟೆ ಬಿಚ್ವಿ ಬೀಗಿದಿರೇನು?
ಅಯ್ಯೋ ಮರುಳರೆ ಬೆತ್ತಲಾಗಿದ್ದು ನಾನಲ್ಲ ನೀವು.
ಇದೇ ಯೋನಿಯಿಂದ ಜಾರಿ ಬಂದವರೆ
ಈಗ ಕೈ ತೂರಿ
ಏನ ನೋಡುವಿರಿ?
ಹನಿಹನಿ ಹಾಲುಣಿಸಿ ಜೀವವಿಟ್ಟ ಮೊಲೆಯನೇ ಹಿಚುಕಿ ಏನ ಹುಡುಕುವಿರಿ?
ಮಾಂಸದ ಮಡಕೆ
ರಕುತದ ಕುಡಿಕೆ
ಎಲುಬಿನ ಹಡಿಕೆ
ಚರ್ಮದ ಹೊದಿಕೆ….
ನೀವೆಷ್ಟೇ ಬಗೆದರೂ ಮತ್ತೇನೂ ಸಿಗದು
ಎಲೆ ಗಂಡಸೇ….
ತಾಯ ತಿರಸ್ಕಾರದ ಹೊರತು.
ನಿಮಗೆ ಜೀವವಿತ್ತು ಜತನದಿಂದ ಲೋಕಕ್ಕೆ ತಂದು
ಹಾಲ್ಗಲ್ಲ ಸವರಿ
ಕರುಣದಿ ಕಣ್ಣುಕೊಟ್ಟು
ಮೊಲೆ ತೊಟ್ಟ ಹಿಂಡ್ಹಿಂಡಿ ಗಾಯದಿ ನರಳುತಲೆ
ನಿಮಗೆ ಹಾಲುಣಿಸಿ
ನಗುವ ತುಟಿಗಿಟ್ಟವರು ನಾವು.
ಬೆಳೆಬೆಳೆದು ಮೀಸೆ ಬಂದಷ್ಟಕ್ಕೆ ಗಂಡಸಾದಿರಲ್ಲ…!
ಹೆತ್ತಂತವಳ ನಗ್ನಗೊಳಿಸಿ
ಧಾಳಿಗೈವ ದುರುಳತನವೇನೋ ಮಗುವೆ?
ಒಮ್ಮೆಯೂ ಮನುಷ್ಯನಾಗಲೊಲ್ಲದ
ನಿನ್ನೀ ಬೆರಳುಗಳ ಮುರಿದು ಚಲ್ಲಾಡಬಲ್ಲೆ.
ಹರಿದ ರಕ್ತ ನದಿಯಲ್ಲಿ
ಮುಳುಮುಳುಗಿಸಿ ನಿನ್ನ ಉಸಿರಗಟ್ಟಿಸಬಲ್ಲೆ.
ನಾ ಸಾವ ಬಾಗಿಲ ತಟ್ಟಿ
ನಿನಗಿತ್ತ ಜೀವವ ಈ ಕ್ಷಣದಿ ಇಲ್ಲವಾಗಿಸಬಲ್ಲೆ.
ಏಕೆಂದರೆ ನಾ ‘ತಾಯಿ’
ಮಕ್ಕಳು ಬೆತ್ತಲಾದರೆ ಸಹಿಸಲಾರದು ಜೀವ.
ಏಕೆಂದರೆ ನಾ ‘ತಾಯಿ’.
ನಾ ಯೋನಿಯಲ್ಲ
ನಾ ಮೊಲೆಯಲ್ಲ
ಕಟಿ ತುಟಿಯೂ ಅಲ್ಲ
ನಾ ‘ತಾಯಿ’.
ಕೆ.ನೀಲಾ
ಕಾವ್ಯ – 02
ದ್ರೌಪದಿಯರ ಭಾರತ
ದ್ವಾಪರದ ಭಾರತ
ಮುಗಿದುಹೋಯಿತು
ಅಂದವರ್ಯಾರು?
ಮತ್ತೆಮತ್ತೆ
ಮರುಕಳಿಸುತ್ತಲೇ ಇದೆ,
ದುಶ್ಯಾಸನರ ಅಟ್ಟಹಾಸದಲ್ಲಿ;
ನಲುಗುತ್ತಿರುವ
ದ್ರೌಪದಿಯರ ಸೀರೆಯ
ಸೆರಗುಗಳಲ್ಲಿ!
ರಾಜಸಭೆಯಲ್ಲಿ
ಹರಾಜುಗೊಂಡ
ಪಾಂಚಾಲಿಯ ಮಾನ,
ಇಂದು ನಡುಬೀದಿಯ ನಡುವೆ
ಬಿಕರಿಗೊಳ್ಳುತ್ತಿದೆ
ಬೆತ್ತಲೆಯ ಮೆರವಣಿಗೆಯಲ್ಲಿ;
ವಿಜಯೋತ್ಸವದ
ವಿಕಾರ ರೂಪದಲ್ಲಿ!
ಗಾಂಧಾರಿಯ ತೊರೆದ
ಧೃತರಾಷ್ಟ್ರನೀಗ
ಕಣ್ಣಿಲ್ಲದ
ಕುರುಡನಷ್ಟೇ ಅಲ್ಲ,
ಮಾತು ಕಳೆದುಕೊಂಡ
ಮೂಗನೂ ಹೌದು
ಮತಿ ಕಳೆದುಕೊಂಡ
ಮೂಢನೂ ಹೌದು;
ಶಕುನಿಗಳು ನೂರ್ಮಡಿಸಿರುವ
ಪಗಡೆಯಾಟದಲ್ಲಿ
ಮತ್ತೆಮತ್ತೆ
ಬೆತ್ತಲಾಗುತ್ತಲೇ ಇದ್ದಾರೆ
ದ್ರೌಪದಿಯರು,
ಸೀತೆಯಂತೆ
ಜ್ವಾಲೆಗಳ ನಡುವೆ
ಬೆಂದುಹೋಗುವ
ಭಾಗ್ಯವೂ ತಮಗಿಲ್ಲವಾಯಿತೆಂಬ
ಕೊರಗಿನಲ್ಲಿ!
ಪೂತನಿಯ
ಸ್ತನ ಕಚ್ಚಿ
ಕೊಂದ ಕೃಷ್ಣ,
ಇಂದು ಅದ್ಯಾಕೋ
ದ್ರೌಪದಿಯರ
ಮಾನ ಕಾಯಲು
ಎಣಿಸುತ್ತಿದ್ದಾನೆ
ಮೀನಾಮೇಷ,
‘ಯದಾ ಯದಾಹೀ
ಧರ್ಮಸ್ಯ’
ಎಂದರೇನೆಂಬ
ಗೊಂದಲದಲ್ಲಿ!
ಕೀಚಕನು ಒಬ್ಬನಲ್ಲ,
ಸಂಖ್ಯೆಯಲಿ ಇಂದು
ಅವರಿಗೆ ಮಿತಿಯಿಲ್ಲ,
ಎಲ್ಲೆಂದರಲ್ಲಿ,
ಹೇಗೆಂದರ್ಹಾಗೆ
ನರಳುತ್ತಿರುವ
ದ್ರೌಪದಿಯರ ಹಿತಕಾಯುವ
ಭೀಮಸೇನನೂ
ಅದ್ಯಾಕೋ ಕಾಣುತ್ತಿಲ್ಲ!
ದ್ವಾಪರದ ಭಾರತ
ಮುಗಿದುಹೋಯಿತು
ಅಂದವರ್ಯಾರು?
ಮತ್ತೆಮತ್ತೆ
ಮರುಕಳಿಸುತ್ತಲೇ ಇದೆ,
ಬೆತ್ತಲಾಗುತ್ತಿರುವ
ದ್ರೌಪದಿಯರ
ನಿಟ್ಟುಸಿರುಗಳಲ್ಲಿ!
ಇದನ್ನೂ ಓದಿ:ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ : ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು
– ಮಾಚಯ್ಯ ಹಿಪ್ಪರಗಿ
ಕಾವ್ಯ – 03
“ಮಣಿಪುರ”
ಓ ಸಪ್ತ ಸೋದರಿಯರೇ
ಇಷ್ಟು ದಿನ ನೀವು ಸುಪ್ತವಾಗಿ
ಕಂಡು ಕಾಣದಂಗೆ ಹೊದ್ದು ಮಲಗಿದ್ದು ಸಾಕು
ಅಂದು ಗುಜರಾತ್ ಇಂದು ಮಣಿಪುರ
ನಾಳೆ ಇನ್ನೇಲ್ಲೋ ಎಂದು ಕಾಯಬೇಕಿಲ್ಲ
ತಾಯಿ ತಂಗಿ ಹೆಂಡತಿ ಮಗಳು
ಕೊನೆಗೆ ಹೆಣ್ಣೊಂದು ಸಿಕ್ಕರೆ ಸಾಕು
ಹರಿದು ಹುರಿದು ಮುಕ್ಕುತಿಹ ಮುಠ್ಠಾಳರು
ಬರ್ಬರವಾಗಿ ಹೆಣ್ಣಿನ ಅವಯವಗಳಿಗೆ ಕೈಹಾಕುವ
ಹೀನ ಮನಸ್ಸಿನ ಆ ಗಂಡೆಂಬ ಪ್ರಾಣಿಗಳು
ತಾನು ಒಂದು ದಿನ ಅದೇ ಹರಿವ ನೆತ್ತರೊಳಗಿಂದ
ಹರಿದು ಬಂದಿರುವುದ ಮರೆತು
ಮನ ಬಂದಂತೆ ಮೈಮೇಲೆ ಎರಗುತಿಹ
ಓ ಭಾರತ ಮಾತೆಯ ಕುಲಗೆಟ್ಟ ಪುತ್ರರೇ
ಓ ಮನುವಾದಿ ಹೊಲಸು ಮನಸಿನ
ವೀರ್ಯತುಂಬುವ ಹುಂಬ ಗಂಡುಗಳೇ
ನಿಮಗಿದೋ ನಮ್ಮ ಧಿಕ್ಕಾರ ಧಿಕ್ಕಾರ
ದೊರೆತನಕ ದೂರು ಹರಿದರೂ
ದೂರೇನೆಂದು ಕೇಳದ ದುಷ್ಟ ದೊರೆ
ಬರೀ ಪಟದ ಭಾರತಮಾತೆಗೆ ಮಾತ್ರ ನಮಿಸುತಿಹ
ನಿಮ್ಮ ಮನುವಾದಿ ಅಮಾನುಷ ಮನುಷ್ಯರಿಗೆ
ಮತ್ತೊಮ್ಮೆ ಹೇಳೋಣ ಧಿಕ್ಕಾರ ಧಿಕ್ಕಾರ
ಜನಾರ್ಧನ ಸಿಹಿಮೊಗೆ
ಸಮುದಾಯ ಕೆಜಿಎಫ್
ಕಾವ್ಯ – 04
ಕನಸು, ಕೊಲೆ
ಅತ್ಯಾಚಾರ.
ಪೋಲೀಸರ ಕಡತದಲ್ಲಿ ಮತ್ತೊಂದು ಸೇರ್ಪಡೆ
ಮಾಧ್ಯಮಗಳಲ್ಲೊಂದು ಟೈಂಪಾಸ್ ಚರ್ಚೆ
ನಡೆದ ವಿಧಾನ ಹೊಸತಿದ್ದರೆ ಒಂದಿಷ್ಟು ಉದ್ವೇಗ
ನಾಗರಿಕರ ಬಾಯಲ್ಲಿ “ಛೆ” ಎಂಬ ಉದ್ಗಾರ
ಪುರುಸೊತ್ತಿದ್ದವರ ಸಂಜೆ ಹರಟೆಯಲಿ
ಹೆಣ್ಣುಮಕ್ಕಳ ಕುರಿತ ಅನುಕಂಪ, ಆರೋಪ
ಉಪದೇಶ, ಎಚ್ಚರಿಕೆ.
ಮಾರನೆಯ ದಿನ ಎಲ್ಲ ಮಾಮೂಲಿ, ಮರೆವು.
ಅತ್ಯಾಚಾರ.
ಒಂದು ಕನಸಿನ ಕೊಲೆ
ಮದ್ದಿಲ್ಲದ ಕ್ಯಾನ್ಸರ್ ಬೇನೆ
ಪಾದಗಳಿಗೆ ಬಡಿದ ಮುಳ್ಳು
ಉಸಿರುಸಿರಿನ ಅಪಮಾನ
ಮತ್ತೆ ಮತ್ತೆ ಸಾಬೀತುಮಾಡಬೇಕಾದ
ಸಾಚಾತನದ ಯಾತನೆ
ಪ್ರೀತಿಯ ಚಿಗುರು ಸುಟ್ಟ ವಾಸನೆ
ಅರ್ಥವಿಲ್ಲದ ಪ್ರಶ್ನೆ
ಬದುಕಿಡೀ ಹೊರುವ ಭಯ, ದಿಗಿಲು.
ಅತ್ಯಾಚಾರ,
ಗಂಡುತನದ ಮಾನಭಂಗ
ಮಾನವೀಯತೆಯ ಚರ್ಮ ಸುಲಿದ
ರಣಗಾಯದ ವಾಸನೆ
ಹೆತ್ತವಳ ಮನಸಿಗೆ ಹುಚ್ಚು
ಮೊಲೆಹಾಲಿಗೆ ದುರ್ನಾತ
ಹೀನಸುಳಿಯೊಳಗೆ ಉಸಿರುಗಟ್ಟಿ
ಹಾದಿಯುದ್ದ ಬಿದ್ದಿತು, ಜೋಗುಳದ ಹಾಡಿನ ಹೆಣ
ಅತ್ಯಾಚಾರ.
ಕೈ ಮುಟ್ಟಿದ ಪುಸ್ತಕದ ಹಾಳೆಗಳ ಸುಟ್ಟು ಚೆಲ್ಲಿತು
ಪಾಠ ಹೇಳಿದ ಎಲ್ಲರ ಮುಖಕೆ ಹೇಸಿಗೆ ಮೆತ್ತಿತು
ಜೊತೆಬಾಳಿನ ಬೂದಿಗೆಡವಿತು.
ಉಣಿಸಿದವರನ್ನು ಬೆಳೆಸಿದವರನ್ನು
ಕಟ್ಟಿದ್ದೇವೆ ಸಂಸ್ಕೃತಿಯೆಂಬ ಹಮ್ಮುದಾರರನ್ನು
ಕಾನೂನಿನ ಕಕ್ಷಿದಾರರನ್ನು ಸರತಿಯಲಿ ನಿಲ್ಲಿಸಿತು
‘ಉತ್ತರಿಸಿ’ ಎಂದು ಹೂಂಕರಿಸಿತು
ಮನುಷ್ಯತ್ವವ ಮಾರಿಕೊಂಡವರು
ಹಣ ಹಣ ಎಂದು ,ಜಾತಿ ಜಾತಿ ಎಂದು
ಧರ್ಮ ಧರ್ಮ ಎಂದು ಹುಚ್ಚೇರಿಸಿಕೊಂಡವರು
ಎತ್ತೆತ್ತಲೋ ನೋಡುತ್ತ ಕ್ಷೇಮವಾಗಿದ್ದರು
ಕಣ್ಣಿಲ್ಲದ, ಕಿವಿಯಿಲ್ಲದ, ಮೆದುಳಿಲ್ಲದ
ಹೃದಯವೂ ಇಲ್ಲದ ಬಾತ ದೇಹಗಳು
ನಿರ್ದಯ ಹಗಲು ರಾತ್ರಿಗಳಲಿ
ಕನಸುಗಳ ಕೊಲೆ, ಸುಮ್ಮನೆ ನಡೆಯುತ್ತಲೇ ಇದೆ.
-ನಭಾ
ಕಾವ್ಯ – 05
ಆಕ್ರಂದನ
ರಾಜ ಬೀದಿಯ ಸಡಗರ ಬೆಚ್ಚುವಂತಹ
ಆಕ್ರಂದನ
ಅದೊಂದು ಹೆಣ್ಣಿನ ದನಿ
ಮಗಳೊ, ತಾಯಿಯೋ, ಮಡದಿಯೋ
ಗೊತ್ತಿಲ್ಲ ಯಾರಿಗೂ
ಒಟ್ಟಿನಲಿ ಈ ದೇಶದ ಮಗಳು.
ಅವಳ ಎದೆಯಲ್ಲಿ ಮುಲುಗುವ
ಮುಗಿಲೆತ್ತರದ ಅರ್ಥ ಯಾರಿಗೂ ತಿಳಿದಿಲ್ಲ
ಬಯಲು ಬೆಪ್ಪಾಗುವ ಎದೆ ಮಿಡಿತ
ಯಾರೂ ಕೇಳಲಿಲ್ಲ.
ಕೋಟೆಯ ತುಟಿ ಗುನುಗುತ್ತಲೇ ಇದೆ
” ಬೇಟಿ ಬಚಾವ್ ಬೇಟಿ ಪಡಾವ್ ”
ಬಂಜೆ ಮೋಡದ ಮಿಂಚು ಸಿಡಿಲು
ಯಾರಿಗೆ ಬೇಕು?
ಎಲ್ಲರ ಮಾರಿಯಲಿ ನಿರಾಸೆಯ ಕುಯಿಲು.
ತವಕಿಸುತ್ತಾಳೆ ಕಣ್ಣಲ್ಲಿ ತುಂಗಭದ್ರೆ
ತೂಫಾನ್ ಆಗಲು
ಉಕ್ಕಿದರೂ ತಟ್ಟದ ಬಿಸಿ ಐವತ್ತಾರಿಂಚಿನೆದೆಗೆ.
ಮನದ ಮಾತಲ್ಲಿ ಉಗುಳ ಸಿಡಿತ
ಅಮಾಯಕರ ಪ್ರಾಣಯಜ್ಞಕೆ
ಬಯಲೆಲ್ಲ ಕೆಸರ ಕಡಿತ.
ಅವಳ ಆಕ್ರಂದನಕೆ ಎಚ್ಚೆತ್ತ
ಸತ್ಯದ ಕಣ್ಣನ್ನು ಕುರುಡಾಗಿಸಲು
ಲಾಠಿ ಬೂಟುಗಳ ಧೂಳು.
ಕೇಳುತ್ತೇನೆ ದೊರೆಯೆ
ನಿಮಗೆ ತಾಯಿ, ಅಕ್ಕ ತಂಗಿ ಹೆಂಡತಿ ಇದ್ದಾರ .
ಹೋಗಲಿ ಮಗಳು ?
ಪಿಆರ್. ವೆಂಕಟೇಶ್
ಕಾವ್ಯ – 06
ಅರೇ ಓ.. ಚೌಕಿದಾರ್
ಬೀದಿ ಬೀದಿಗಳಲ್ಲಿ
ನೀನೆ ಸಲುಹಿದ ಗುಂಡಾ
ಸಾಮ್ರಾಜ್ಯ ನೋಡಾ.
ತಾಯಿಯ ಎದೆಹಾಲು
ಹೆಪ್ಪುಗಡಿಸುವಂತ.
ಹಾವುಗಳೆ
ಹೆಡೆ ಎತ್ತಿ ನಿಂತಿವೆ.
ಎದೆ ಹಿಡಿದು
ಹಾಲು ಕುಡಿದ ಕೈಗಳೇ
ನೆತ್ತರ ಚಿಮ್ಮುವಂತೆ ಚಿವುಟುತ್ತಿವೆ.
ಅರೇ ಓ.. ಚೌಕಿದಾರ್
ಹೆತ್ತವಳ ಒಡಲಿಗೆ
ಬೆಂಕಿ ಇಟ್ಟು
ಅದೇ ಕಾವಲ್ಲಿ
ಮೈ ಬಿಸಿ ಮಾಡಿಕೊಳ್ಳುವ
ನಾಲಾಯಕರ ಸಾಮ್ರಾಜ್ಯ
ನೀನ್ನದೆನಾ?
ಭಾರತ ಮಾತಾ ಕೀ
ಜೈಕಾರದ ಕೈಗಳೇ..
ಭಾರತ ಮಾತೆಯರಿಗೆ
ಬೆತ್ತಲ ಮೆರವಣಿಗೆ!!
ಬೀದಿಯುದ್ದಕ್ಕೂ ಅತ್ಯಾಚಾರ!!
ದೇಶ ಭಕ್ತಿ ಎಂದರೆ ಇದೆನಾ?
ಅರೇ ಓ.. ಚೌಕಿದಾರ್
ನೀನೆ ಸಲುಹಿದ
ನೀನೆ ಬೆಳೆಸಿದ
ರಾಕ್ಷಸರ ಸಾಮ್ರಾಜ್ಯದಲ್ಲಿ.
ಬೇಟಿ ಪಡಾವೊ
ಬೇಟಿ ಬಚಾವೊ
ಎಂಬ ವಾಕ್ಯಕ್ಕೆ ಅರ್ಥವಿದೆಯೇ?
ಕಂಡ ಕಂಡಲ್ಲಿ
ಕಂದಮ್ಮಗಳನ್ನ ಕೊಲ್ಲುವಾಗ.
ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡೆ ಕುಂತಿದ್ದಿಯಲ್ಲಯ್ಯ.
ಅರೇ ಓ.. ಚೌಕಿದಾರ್
ನಿನ್ನ ಈ ದುರುಳರ ರಾಜ್ಯದಲ್ಲಿ
ನಿತ್ಯ ಹೆಣ್ಣು ದೇಹಗಳ
ನರಳಾಟದ ಕೂಗು.
ಪುಟ್ಟ ಕಂಗಳ ಕನಸು
ಕಣ್ಮರೆಯಾಗುತ್ತಿರುವ ಕಾಲವಿದು.
ಎಲ್ಲಿ ನೋಡಿದರಲ್ಲಿ
ನೆತ್ತರಿನ ಚಿತ್ತಾರ.
ಬದುಕಿನ ಹೋರಾಟ
ಮುಗಿಯದ ಸಂಘರ್ಷ
ಅರೇ ಓ.. ಚೌಕಿದಾರ್
ಬೀದಿ ಬೀದಿಯಲ್ಲಿ
ನೀನೆ ಸಲುಹಿದ ಗುಂಡಾ
ಸಾಮ್ರಾಜ್ಯ ನೋಡಾ.
ಪ್ರಿಯಾಂಕಾ ಮಾವಿನಕರ್