ಮಂಗಳೂರು ನಗರ ಪಾಲಿಕೆ ಆಯುಕ್ತರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ : ವಿಶೇಷ ತನಿಖಾ ತಂಡ ರಚನೆಗೆ ಸಿಪಿಐ(ಎಂ) ಒತ್ತಾಯ

ಮಂಗಳೂರು : ಮಂಗಳೂರು ನಗರ ಪಾಲಿಕೆಯ ಆಯುಕ್ತರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಹಿರಿಯ ಸದಸ್ಯ ಅಬ್ದುಲ್ ರವೂಫ್ ದಾಖಲೆಗಳನ್ನು ಮುಂದಿಟ್ಟು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಪಾಲಿಕೆ ಸದಸ್ಯ ರವೂಫ್, ಆಯುಕ್ತರ ಮೇಲೆ ಹೊರಿಸಿರುವ ಭ್ರಷ್ಟಾಚಾರದ ಗಾತ್ರ ಗಾಭರಿ ಹುಟ್ಟಿಸುವ ಪ್ರಮಾಣದಲ್ಲಿದ್ದು, ಈ ಕುರಿತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದ ಮೂಲಕ ತನಿಖೆಯನ್ನು ನಡೆಸಬೇಕು ಎಂದು ಸಿಪಿಐ (ಎಂ) ದ‌.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಈ ಕುರಿತು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪತ್ರಿಕಾ ಹೇಳಿಕೆ ನಿಡಿದ್ದು,  ಮಂಗಳೂರು ನಗರ ಪಾಲಿಕೆ ಆಯುಕ್ತರ ಮೇಲೆ ಈ ಹಿಂದೆಯೂ ಭ್ರಷ್ಟಾಚಾರ, ಸರ್ವಾಧಿಕಾರಿ ನಡೆಯ ಕುರಿತು ಹಲವು ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿ ಆಡಳಿತದಲ್ಲಿ ಮಂಗಳೂರು ನಗರ ಪಾಲಿಕೆ ಮೊದಲೇ ಭ್ರಷ್ಟಾಚಾರ, ದುರಾಡಳಿತದಿಂದ ನಲುಗಿ ಹೋಗಿದೆ. ಜಲಸಿರಿ, ಯುಜಿಡಿ, ಸ್ಮಾರ್ಟ್ ಸಿಟಿ ಯೋಜನೆಗಳ ಭ್ರಷ್ಟಾಚಾರ, ಟಿಡಿಆರ್ ಹಗರಣ, ಅಡ್ಡಾದಿಡ್ಡಿ ಕೆಲಸಗಳಿಂದ ನಾಗರಿಕಗರು ರೋಸಿಹೋಗಿದ್ದರು. ಇದರ ನಡುವೆ ನಗರ ಪಾಲಿಕೆಗೆ ಆಯುಕ್ತರಾಗಿ ಆನಂದ್ ಸಿ ಎಲ್ ಆಗಮಿಸಿದ ತರುವಾಯ, ಅವರ ವಿಲಕ್ಷಣ ನಡವಳಿಕೆ, ಪ್ರತಿಯೊಂದರಲ್ಲೂ ಯಾವ ಮುಲಾಜು ಇಲ್ಲದೆ ಹಣದ ಬೇಡಿಕೆ ಇಡುತ್ತಾರೆ ಎಂಬ ಆರೋಪಗಳು ಮಂಗಳೂರು ನಗರ ಪಾಲಿಕೆಯಲ್ಲಿ ಗಂಭೀರ ಸ್ಥಿತಿಯನ್ನು ನಿರ್ಮಿಸಿದೆ. ಜನತೆ ನಗರ ಪಾಲಿಕೆ ಮೇಲೆ ಪೂರ್ತಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ‌ ಎಂದಿದ್ದಾರೆ.

2001 ರಿಂದ ಕಟ್ಟಲ್ಪಟ್ಟ ಪ್ರಭಾವಿಗಳಿಗೆ ಸೇರಿದ ಹಲವು ಅಕ್ರಮ ವಸತಿ ಸಂಕೀರ್ಣ, ವಾಣಿಜ್ಯ ಕಟ್ಟಡಗಳಿಗೆ ಕಂಪ್ಲೀಷನ್ ಪ್ರಮಾಣ ಪತ್ರ ನೀಡಿದ್ದಾರೆ ಎಂಬುದು ಅತ್ಯಂತ ಗಂಭೀರ ವಿಷಯವಾಗಿದೆ. ಕೆಡವಲು ಆದೇಶವಾದ ಕಟ್ಟಡದ ಫ್ಲೋರ್ ಗಳು, ನ್ಯಾಯಾಲಯದಲ್ಲಿ ತಡೆ ಇರುವ ಕಟ್ಟಡಗಳೂ ಇದರಲ್ಲಿ ಸೇರಿದೆ ಎನ್ನಲಾಗಿದೆ. ಕಳೆದ ಎರಡು ದಶಕದಲ್ಲಿ ಎಷ್ಟೇ ಒತ್ತಡ ಇದ್ದರೂ, ಯಾವ ಅಧಿಕಾರಿಗಳೂ ಮುಟ್ಟದ ಈ ಫೈಲ್ ಗಳನ್ನು ತೀರಾ ಸರಳವಾಗಿ ಕಂಪ್ಲಿಷನ್ ಸರ್ಟಿಫಿಕೇಟ್ ನೀಡಿ ಕ್ಲಿಯರ್ ಮಾಡಿದ್ದಾರೆ ಎಂಬ ಆರೋಪ ಯಾವುದೆ ಕಾರಣಕ್ಕೂ ತನಿಖೆ ಇಲ್ಲದೆ ಬಿಟ್ಟು ಬಿಡುವ ಪ್ರಕರಣ ಖಂಡಿತಾ ಅಲ್ಲ. ಇದರ ಜೊತೆಗೆ ಐದು ಲಕ್ಷ ರೂಪಾಯಿಗೆ ಮೀರಿದ ವೆಚ್ಚದ ಕಾಮಗಾರಿಗಳನ್ನು ತುರ್ತು ಕಾಮಗಾರಿ ಪಟ್ಟಿಗೆ ಸೇರಿಸಿ ನೇರವಾಗಿ ಕಾಮಗಾರಿ ಗುತ್ತಿಗೆ ನೀಡಿರುವುದು ನಿಯಮಗಳ ಬಹಿರಂಗ ಉಲ್ಲಂಘನೆ ಆಗಿದೆ. ಇನ್ನು ವಿವಿಧ ಕಾಮಗಾರಿಗಳಿಗೆ ನಗರ ಪಾಲಿಕೆಯಯ ಹಣಕಾಸು ಸಾಮರ್ಥ್ಯ 60 ಕೋಟಿ ಇರುವಾಗ 160 ಕೋಟಿಗೆ ಮಂಜೂರಾತಿ ನೀಡಿರುವುದು ನಗರ ಪಾಲಿಕೆಯನ್ನು ಪೂರ್ತಿ ದಿವಾಳಿ ಮಾಡುವ ಭ್ರಷ್ಟ ನಡೆ ಅಲ್ಲದೆ ಇನ್ನೇನಲ್ಲ. ಇದರ ಜೊತೆಗೆ, ತನ್ನ ಮೇಲೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಪಾಲಿಕೆ ಸದಸ್ಯರು ಮಾಡಿದ ಆರೋಪಕ್ಕೆ ಆಯುಕ್ತರು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವುದು ವಿಲಕ್ಷಣ ನಡೆಯಾಗಿದೆ. ಇದು ಖಂಡನೀಯ ಮಾತ್ರ ಅಲ್ಲ, ಶಿಸ್ತು ಕ್ರಮಕ್ಕೆ ಅರ್ಹ ಪ್ರಕರಣವಾಗಿದೆ ಎಂದಿದ್ದಾರೆ.

ಬಿಜೆಪಿ ದುರಾಡಳಿತದಿಂದ ಬಸವಳಿದಿರುವ ಮಂಗಳೂರು ನಗರದ ಜನತೆಗೆ ಈ ಸರ್ವಾಧಿಕಾರಿ ನಡೆಯ ಆಯುಕ್ತರ ಭ್ರಷ್ಟಾಚಾರ ಅರಗಿಸಲು ಅಸಾಧ್ಯ ಎಂಬಂತಾಗಿದೆ. ಇದು ಮಂಗಳೂರು ನಗರಪಾಲಿಕೆಯ ಆಡಳಿತ ಸರಿಪಡಿಸಲು ಅಸಾಧ್ಯವಾಗುವಷ್ಟು ಹದಗೆಡುವ ಸ್ಥಿತಿಗೆ ಕಾರಣವಾಗಿದೆ. ಈ ಕುರಿತು ನಗರ ಪಾಲಿಕೆಯ ಕಾಂಗ್ರೆಸ್ ನ ಹಿರಿಯ ಸದಸ್ಯನೇ ಆರೋಪ ಹೊರಿಸಿರುವುದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಆಯುಕ್ತರ ಮೇಲಿನ ಆರೋಪಗಳನ್ನು ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಒಳಪಡಿಸಬೇಕು. ಆಯುಕ್ತರ ಮೇಲಿನ ಆರೋಪಗಳ ಜೊತೆಗೆ ಈ ಹಿಂದೆ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದ ಮರಕಡ, ಪಚ್ಚನಾಡಿ ಗ್ರಾಮದ ಜಮೀನುಗಳ ಟಿಡಿಆರ್ ಹಗರಣ, ಜಲಸಿರಿ ಯೋಜನೆಯ ಕುರಿತಾದ ಆರೋಪ, ಸ್ಮಾರ್ಟ್ ಸಿಟಿ ಹಗರಣಗಳನ್ನು ಈ ತಂಡದ ತನಿಖಾ ವ್ಯಾಪ್ತಿಗೆ ತರಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

 

Donate Janashakthi Media

Leave a Reply

Your email address will not be published. Required fields are marked *