ಮಂಗಳೂರು: ಗಣೇಶೋತ್ಸವಕ್ಕೆ 2 ಲಕ್ಷ ರೂ. ನೀಡಬೇಕೆಂದ ಬಿಜೆಪಿ ಶಾಸಕನ ತಂಡ, ಕುಲಪತಿ ಮೇಲೆ ಗೂಂಡಾಗಿರಿ!

ಮಂಗಳೂರು: ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆಯ ಬೇಡಿಕೆಯಂತೆ ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು, ಹಾಗೂ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದಲೇ ಗಣೇಶೋತ್ಸವ ಮಾಡಬೇಕು ಎಂದು ವಿಶ್ವವಿದ್ಯಾಲಯದ ಉಪ ಕುಲಪತಿಗೆ ಮಂಗಳೂರು ನಗರ ದಕ್ಷಿಣದ ಬಿಜೆಪಿ ಶಾಸಕರ ನೇತೃತ್ವದ ತಂಡ ಅವರ ಪಕ್ಷದ ಮುಖಂಡರೊಂದಿಗೆ ವಿಶ್ವವಿದ್ಯಾಲಯದ ಕಚೇರಿಗೆ ತೆರಳಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಶಾಸಕ ಹಾಗೂ ನಾಯಕರು ಕುಲಪತಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ, ರೌಡಿಗಳಂತೆ ಬೆದರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆ ಬಗ್ಗೆ ಮಂಗಳೂರು ಉಪ ಕುಲಪತಿ ಜಯರಾಜ್ ಅಮೀನ್ ಸರ್ಕಾರಕ್ಕೆ ಬರೆದಿರುವ ಪತ್ರ ಜನಶಕ್ತಿ ಮೀಡಿಯಾಗೆ ಲಭ್ಯವಾಗಿದೆ. ಪತ್ರದಲ್ಲಿ, “ಬೆಳವಣಿಗೆಗಳ ಬಗ್ಗೆ ನನಗೆ ಕರೆ ಬರುತ್ತಿದ್ದು, ಸೆಪ್ಟೆಂಬರ್‌ ಶುಕ್ರವಾರದಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಬಿಜೆಪಿಯ ಸಂತೋಷ್‌ ಕುಮಾರ್‌ ಬೋಳಿಯಾರ್‌, ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್‌ ಸದಸ್ಯರಾದ ರಮೇಶ್‌ ಕೆ. ಹಾಗೂ ಇತರ ಸುಮಾರು 8 ಮಂದಿ ಜೊತೆಗೂಡಿ ನನ್ನ ಕಚೇರಿಗೆ ಆಗಮಿಸಿ ಈ ಬಾರಿಯ ಗಣೇಶೋತ್ಸವ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ವತಿಯಿಂದಲೇ ಆರ್ಥಿಕ ವೆಚ್ಚವನ್ನು ಭರಿಸಿಕೊಂಡು ಮಂಗಳ ಸಭಾಂಗಣದಲ್ಲಿ ನಡೆಸಬೇಕೆಂದು ಆಗ್ರಹಿಸಿ, ಸುಮಾರು 2 ಗಂಟೆಗಳ ಕಾಲ ನನ್ನ ಮೇಲೆ ಒತ್ತಡ ತಂದಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೌರಿ ಹತ್ಯೆಯ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಒಂದು ವೇಳೆ ಗಣೇಶೋತ್ಸವವಕ್ಕೆ ಒಪ್ಪಿಗೆ ನೀಡದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಾಗೂ ಹೋರಾಟ ನಡೆಸುವುದಾಗಿ ಹಾಗೂ ಈ ಬಗ್ಗೆ ಮಾಧ್ಯಮ ಗೋಷ್ಠಿ ನಡೆಸುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಪತ್ರದಲ್ಲಿ ಹೇಳಿರುವ ಉಪ ಕುಲಪತಿ, “ಬಿಜೆಪಿ ಶಾಸಕರ ನೇತೃತ್ವದ ತಂಡವು ವೈಯಕ್ತಿಕವಾಗಿ ಆಕ್ರಮಣದ ನಿಲುವನ್ನು ಪ್ರದರ್ಶಿಸಿರುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉದ್ದಿಗ್ನ ಮತ್ತು ಸೂಕ್ಷ್ಮ ಪರಿಸ್ಥಿತಿಯನ್ನು ಗಮನಿಸಿ ನಮಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಬೇಕೆಂದು ಸರ್ಕಾರದ ಜೊತೆಗೆ ಮನವಿ ಮಾಡಿದ್ದಾರೆ.

ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಅವರನ್ನು ‘ಗೂಂಡಾ ಶಾಸಕ’ ಎಂದು ಕಿಡಿ ಕಾರಿದ್ದಾರೆ. “ವಿಶ್ವ ವಿದ್ಯಾಲಯದ ನಿಧಿ ಯಾವುದೆ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ಮಂಗಳೂರು ನಗರ ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತರಿಗೆ ಇಲ್ಲವೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಗಣೇಶೋತ್ಸವ
ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಸರ್ಕಾರಕ್ಕೆ ಬರೆದಿರುವ ಪತ್ರ. (ಪೂರ್ಣ ಪತ್ರ ಇಲ್ಲಿಓದಿ)

“ಎಬಿವಿಪಿ ಬೇಡಿಕೆಯು ವಿ.ವಿ. ನಿಯಮಗಳಿಗೆ ವಿರುದ್ದವಾಗಿದ್ದು, ಅದಕ್ಕೆ ಒಪ್ಪಿಗೆ ನೀಡದ ಕುಲಪತಿ ಜಯರಾಜ ಅಮೀನ್ ಕಚೇರಿಗೆ ಶಾಸಕ ವೇದವ್ಯಾಸ ಕಾಮತ್ ತನ್ನ ಪಠಾಲಂ ಜೊತೆ ನುಗ್ಗುತ್ತಾರೆ, ನಿಯಮಗಳ ತೊಡಕು ಮುಂದಿಟ್ಟ ಗೌರವಾನ್ವಿತ ಕುಲಪತಿಯವರನ್ನು ಎರಡು ತಾಸಿಗೂ ಅಧಿಕ ಕಾಲ ಅಲ್ಲಾಡಲು ಬಿಡದೆ ಬೆದರಿಸುತ್ತಾರೆ ಎಂಬ ಸುದ್ದಿ ಅವಮಾನಕಾರಿಯಾದದ್ದು. ಎರಡನೇ ಅವಧಿಯ ಶಾಸಕರಿಗೆ ಸಂವಿಧಾನ, ವಿ.ವಿಯ ನಿಯಮಗಳ ಅರಿವಿಲ್ಲದಿರುವುದು, ಹಿಂದುಳಿದ ಸಮುದಾಯದ ಕುಲಪತಿಗಳಿಗೆ ಕನಿಷ್ಟ ಗೌರವವನ್ನೂ ನೀಡದೆ ಗೂಂಡಾಗಿರಿ ಮೆರೆದು ಬೆದರಿಸುವುದು, ಅಪಮಾನಿಸುವುದು ಖಂಡನೀಯ. ಈ ಕುರಿತು ನಾಗರಿಕ ಸಮಾಜ ಧ್ವನಿ ಎತ್ತಬೇಕಿದ್ದು, ಕುಲಪತಿ ಜಯರಾಜ ಅಮೀನ್ ಜೊತೆ ನಿಲ್ಲಬೇಕಿದೆ” ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

“ಸತತ ಎರಡು ಗಂಟೆಗಳ ಕಾಲ ಕುಲಪತಿಗಳನ್ನು ಅವರದ್ದೆ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಥೇಟ್ ರೌಡಿಗಳಂತೆ ಬೆದರಿಸಿದ್ದು, ಇದು ಅನಾಗರಿಕ ನಡೆ ಮಾತ್ರವಲ್ಲ, ತೋಳ್ಬಲದಿಂದಲೇ ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಸಾಧಿಸಿ ಬಿಡುತ್ತೇವೆ ಎಂಬ ದುರಹಂಕಾರ. ದೂರದ ಉತ್ತರ ಭಾರತದ ಮಾದರಿಯನ್ನು ಶಾಸಕ ವೇದವ್ಯಾಸ ಕಾಮತ್ ಇಲ್ಲಿ ಅನುಕರಿಸಿದ್ದಾರೆ. ತುಳುನಾಡಿಗೆ ಇದು ಹೊಸತಾಗಿದ್ದು, ಇಂತಹ ನಡೆಗಳನ್ನು ಈಗಲೇ ಬಲವಾಗಿ ವಿರೋಧಿಸಬೇಕಿದೆ. ಶಾಸಕ ವೇದವ್ಯಾಸರದ್ದು ನಿರಂಕುಶ ಗೂಂಡಾಗಿರಿ” ಎಂದು ಮುನೀರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ: ಗೌರಿ ಹತ್ಯೆ ಪ್ರಕರಣದ ವಿಚಾರಣೆ ವೇಗವಾಗಿ ನಡೆಯುತ್ತಿದೆ – ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *