ಮಂಡ್ಯ ಸಾಹಿತ್ಯ ಸಮ್ಮೇಳನ | ಮನೆಗೊಂದು ಕೋಳಿ ಸಂಗ್ರಹ ಅಭಿಯಾನ: ಬಾಡೂಟ ಬಳಗದ ಸಿದ್ಧತೆ

ಮಂಡ್ಯ :87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ‘ಬಾಡೂಟ’ವನ್ನೂ (ಮಾಂಸಾಹಾರ) ಹಾಕಿಸಬೇಕು ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದರು. ಇತ್ತ ಮನೆಗೊಂದು ಕೋಳಿ ಸಂಗ್ರಹಿಸಿ ಮಾಂಸದೂಟ ಹಾಕಿಸುತ್ತೇವೆ’ ಎಂದು ಮಂಡ್ಯದ ಬಾಡೂಟ ಬಳಗದವರು ಸಿದ್ಧತೆಯನ್ನು ನಡೆಸುತ್ತಿದ್ದಾರೆ.

ಮಂಡ್ಯ ನಗರದ ಕಾವೇರಿ ಉದ್ಯಾನದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ, ‘ಒಂದು ವೇಳೆ ನಮ್ಮ ಒತ್ತಾಯಕ್ಕೆ ಜಿಲ್ಲಾಡಳಿತ ಮತ್ತು ಕಸಾಪ ಪದಾಧಿಕಾರಿಗಳು ಸ್ಪಂದಿಸದಿದ್ದರೆ ಸ್ವಯಂಪ್ರೇರಿತವಾಗಿ ಸಮ್ಮೇಳನದ ಮೊದಲನೇ ದಿನ ಮೊಟ್ಟೆ ವಿತರಣೆ, ಎರಡನೇ ದಿನ ಮುದ್ದೆ- ನಾಟಿ ಕೋಳಿ ಸಾಂಬಾರ್, ಮೂರನೇ ದಿನ ಚಿಕನ್‌ ಬಿರಿಯಾನಿಯನ್ನು ವಿತರಿಸುವ ಚಿಂತನೆ ನಡೆಸಲಾಗಿದೆ.

ಇದನ್ನೂ ಓದಿಸಾಹಿತ್ಯ ಸಮ್ಮೇಳನ – ಮಹಿಳೆಗೆ ಏಕೆ ದಕ್ಕುವುದಿಲ್ಲ? ಸಾಂದರ್ಭಿಕ ನೆಲೆಯಲ್ಲಾದರೂ ಮಂಡ್ಯದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಹಿಳೆ ಇರಬಹುದಿತ್ತಲ್ಲವೇ?

ಇದಕ್ಕೆ ಪೂರಕವಾಗಿ ಮನೆಗೊಂದು ಕೋಳಿಯನ್ನು ಸಂಗ್ರಹಿಸುವ ಅಭಿಯಾನ ನಡೆಸುತ್ತೇವೆ’ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.’ಸಮ್ಮೇಳನ ಹೊರಡಿಸಿರುವ ನಿಬಂಧನೆಗಳಲ್ಲಿ ಬಾಡೂಟವನ್ನು ನಿಷೇಧಿಸಲಾಗಿದೆ’ ಎಂಬ ಹೇಳಿಕೆಯನ್ನು ಒಕ್ಕೊರಲಿನಿಂದ ಸಭೆಯಲ್ಲಿ ಖಂಡಿಸಿದರು. ಮಾಂಸಹಾರ ಅಪರಾಧವೆಂಬಂತೆ ಬಿಂಬಿಸಲಾಗಿದೆ. ಈ ಮೂಲಕ ಬಹುಜನರ ಮಾಂಸಹಾರಿ ಸೇವನೆಗೆ ಅಪಮಾನ ಮಾಡಿದಂತಾಗಿದೆ. ಆಹಾರ ಹಕ್ಕನ್ನು ಅವಮಾನಿಸಿದೆ ಎಂದು ಸಭೆಯಲ್ಲಿ ಚಿಂತಕರು ಅಸಮಾಧಾನ ಹೊರ ಹಾಕಿದರು.

‘ಮಂಡ್ಯ ಭಾಗದ ಮುದ್ದೆ ಮತ್ತು ನಾಟಿಕೋಳಿ ಸಾರಿನ ಊಟಕ್ಕೆ ವಿಶೇಷ ಮಾನ್ಯತೆ ಇದೆ. ಈ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಒತ್ತಾಯಿಸುತ್ತಿದ್ದೇವೆ. ಇದರಲ್ಲಿ ಸಸ್ಯಾಹಾರಿಗಳನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲ’ ಎಂದು ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎಲ್. ಕೃಷ್ಣೇಗೌಡ, ಎಲ್‌. ಸಂದೇಶ್‌, ಎಂ.ಬಿ. ನಾಗಣ್ಣಗೌಡ, ಸಿ. ಕುಮಾರಿ, ಪೂರ್ಣಿಮಾ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಜೊತೆಗೆ ಸ್ವಾಗತ ಸಮಿತಿ ಅಧ್ಯಕ್ಷರಾದ ಸಚಿವ ಚಲುವರಾಯಸ್ವಾಮಿ ಮತ್ತು ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಗಮನಕ್ಕೂ ತರಲಾಗುವುದು ಎಂದು ಮಂಡ್ಯದ ಬಾಡೂಟ ಬಳಗದವರು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *