ಮಹಾಧರಣಿ ಅಂತ್ಯ| ಕರಾಳ ಕಾಯ್ದೆ ಸುಟ್ಟು ಆಕ್ರೋಶ | ಡಿ.19ಕ್ಕೆ ಮುಖ್ಯಮಂತ್ರಿ ಜೊತೆ ಮಾತುಕತೆ

2024ರ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಲು ಮಹಾ ಧರಣಿಯಲ್ಲಿ ನಿರ್ಣಯ

ಬೆಂಗಳೂರು: ದುಡಿಯುವ ಜನತೆಯ ಮಹಾಧರಣಿ’ ಮಂಗಳವಾರ ಅಂತ್ಯಗೊಂಡಿತು. ಧರಣಿಯ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ, ಕಾರ್ಮಿಕ, ದಲಿತ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಲು ಡಿ.19ರಂದು ಸಮಯ ನಿಗದಿ ಮಾಡಿದ್ದಾರೆ.

ನವೆಂಬರ್ 26 ರಂದು ಆರಂಭವಾದ ಮಹಾಧರಣಿಯು 72 ಗಂಟೆಗಳ ಕಾಲ ನಡೆಯಿತು.ಅಂತಿಮ ದಿನ ಹಲವು ನಿರ್ಣಯ ಕೈಗೊಂಡ ಹೋರಾಟಗಾರರು, ಕರಾಳ ಕಾಯ್ದೆಗಳ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಬಯಸುತ್ತಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಭೂತಿದ್ದುಪಡಿ ಕಾಯ್ದೆ ಎಲ್ಲವೂ ಕಾರ್ಪೊರೇಟ್ ಕುಳಗಳ ದಾಹ ತಣಿಸುವ ಸಂಚುಗಳಾಗಿದ್ದು, ಎಲ್ಲ ಕಾಯ್ದೆಗಳನ್ನೂ ವಾಪಸ್‌ ಪಡೆಯುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಮಹಾಧರಣಿಯಲ್ಲಿ ಕೈಗೊಳ್ಳಲಾಯಿತು.

ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಹಿಂದಿನ ಬಿಜೆಪಿ ಸರಕಾರ ತಂದ 4 ಪ್ರಮುಖ ಜನ ವಿರೋಧಿ ಕಾಯ್ದೆಗಳನ್ನು ಇನ್ನೂ ವಾಪಾಸ್ ಪಡೆದಿಲ್ಲ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆ, ಕಾರ್ಮಿಕರ ಕೆಲಸವನ್ನು 8 ರಿಂದ 12 ಗಂಟೆಗೆ ಏರಿಸುವ ಕಾಯ್ದೆಗಳು ಈಗಲೂ ಚಾಲ್ತಿಯಲ್ಲಿವೆ. ಅದನ್ನು ರದ್ದುಗೊಳಿಸಲು ತೋರಬೇಕಾದ ಯಾವ ಉತ್ಸುಕತೆಯನ್ನೂ ರಾಜ್ಯ ಸರಕಾರ ತೋರುತ್ತಿಲ್ಲ. ಬರುವ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ರೈತ, ಕಾರ್ಮಿಕ ವಿರೋಧಿ, ಕೋಮುವಾದಿ ಸರ್ಕಾರವನ್ನು 2024ರ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಲು ನಾಳೆಯಿಂದಲೇ ಕೆಲಸ ಮಾಡಬೇಕೆಂದು ಸಮಿತಿ ಮುಖಂಡರು ಕರೆ ನೀಡಿದರು. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಮುದಾಯಗಳು, ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ಬೃಹತ್ ಆಂದೋಲನ ರೂಪಿಸಿ ಮನೆ ಮನೆಗೆ ಕೊಂಡೊಯ್ಯುವ ಪ್ರತಿಜ್ಞೆ ಮಾಡಿದರು.

ರೈತ ನಾಯಕರಾದ ಜಿಸಿ ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ, ಬಸವರಾಜಪ್ಪ, ನೂರ್ ಶ್ರೀಧರ್, ಕಾರ್ಮಿಕ ನಾಯಕರಾದ ಎಸ್ ವರಲಕ್ಷ್ಮೀ, ಮೀನಾಕ್ಷಿ ಸುಂದರಂ, ವಿಜಯಭಾಸ್ಕರ್, ಕೆ.ವಿ ಭಟ್, ಸಿದ್ದನಗೌಡ ಪಾಟೀಲ್, ದಲಿತ ನಾಯಕಾರಾದ ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ, ಗೋಪಾಲಕೃಷ್ಣ ಹರಳಹಳ್ಳಿ,
ದೇವಿ, ರಮಾ, ಮಲ್ಲಿಗೆ ಸೇರಿದಂತೆ ವಿದ್ಯಾರ್ಥಿ, ಯುವಜನ ನಾಯಕರು ಹಾಜರಿದ್ದರು.

ಮೂರುದಿನಗಳ ಕಾಲ ನಡೆದ ಮಹಾಧರಣಿಯಲ್ಲಿ 50 ಸಾವಿರಕ್ಕೂ ಹೆಚ್ಚು ದುಡಿಯುವ ಜನ‌ಭಾಗವಹಿಸಿದ್ದರು ಎಂದು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಜೆಸಿಟಿಯು ನಾಯಕರು ತಿಳಿಸಿದ್ದಾರೆ.

 

Donate Janashakthi Media

One thought on “ಮಹಾಧರಣಿ ಅಂತ್ಯ| ಕರಾಳ ಕಾಯ್ದೆ ಸುಟ್ಟು ಆಕ್ರೋಶ | ಡಿ.19ಕ್ಕೆ ಮುಖ್ಯಮಂತ್ರಿ ಜೊತೆ ಮಾತುಕತೆ

Leave a Reply

Your email address will not be published. Required fields are marked *