ಮಡಿಕೇರಿ: ಕಳೆದ 18 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಕ್ಷಕಿಯೊಬ್ಬರು ತಮ್ಮ ಸಾವಿನ ನಂತರವೂ ಹಲವರ ಬದುಕಿಗೆ ಬೆಳಕಾಗಿದ್ದಾರೆ. ಇಲ್ಲಿನ ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿಯಾದ ಪಂದ್ಯಂಡ ಆಶಾ (53) ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ.
ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಶಿಕ್ಷಕಿ ಆಶಾ ಅವರು, ದಸರಾ ರಜೆ ಕಳೆಯಲು ಬೆಂಗಳೂರಿನಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದ ವೇಳೆ ಮೆದುಳು ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ನಂತರ ಅವರ ಪತಿ ಹಾಗೂ ಮಕ್ಕಳ ಒಪ್ಪಿಗೆಯ ಮೇರೆಗೆ ಅಂಗಾಂಗ ದಾನ ಮಾಡಲಾಗಿದೆ.
ಮಣ್ಣಲಿ ಮಣ್ಣಾಗುತ್ತಿದ್ದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿ 8 ಜನರ ಜೀವ ದಾನಕ್ಕೆ ಕಾರಣರಾಗಿದ್ದಾರೆ. ಮಕ್ಕಳೆಂದರೆ ಇವರಿಗೆ ಅಚ್ಚುಮೆಚ್ಚು. ಹಾಗಾಗಿ ಮಕ್ಕಳ ಹೆಸರಿನಲ್ಲೇ ಅಂಗಾಂಗ ದಾನ ಮಾಡಿ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಅನಾರೋಗ್ಯಕ್ಕೆ ತುತ್ತಾದ ಆಶಾ ಅವರ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು. ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಹೇಳಿದರು. ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.