ಸಾವೊ ಪಾಲೊ(ಬ್ರೆಜಿಲ್): ಬ್ರೆಜಿಲ್ಲಿನ ಮಾಜಿ ಅಧ್ಯಕ್ಷ ಹಾಗೂ ಎಡಪಂಥೀಯ ಹಿರಿಯ ನಾಯಕ ಲೂಯಿಜ್ ಇನಾಸಿಯೋ ಲುಲಾ ಡಾ ಸಿಲ್ವಾ ಹಾಲಿ ಅಧ್ಯಕ್ಷ ಬಲಪಂಥೀಯ ಜೈರ್ ಬೊಲ್ಸೊನಾರೋರನ್ನು ಸೋಲಿಸಿ ಮತ್ತೊಮ್ಮೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಬ್ರೆಜಿಲ್ ಅಧ್ಯಕ್ಷ ಚುನಾವಣೆಯಲ್ಲಿ ಲುಲಾ ಅವರು ಶೇ. 50.8 ಮತ ಪಡೆದರೆ ಬೊಲ್ಸೊನಾರೋ ಶೇ. 49.2 ಮತ ಪಡೆದರು ಎಂದು ಚುನಾವಣಾ ಅಧಿಕಾರಿಗಳು ವರದಿ ಮಾಡಿದ್ದಾರೆ. ಹಾಗಾಗಿ ಇದು ತೀರಾ ಕಠಿಣ ಪೈಪೋಟಿಯ ಸ್ಪರ್ಧೆಯಾಗಿತ್ತು. ದಶಕದ ಬಲಪಂಥೀಯ ಅಧಿಕಾರ ಕೊನೆಗೊಂಡಂತಾಗಿದೆ. ಮತ ಎಣಿಕೆಯ ಮೊದಲಾರ್ಧದಲ್ಲಿ ಬೋಲ್ಸನಾರೊ ಮುನ್ನಡೆ ಸಾಧಿಸಿದ್ದರು. ಆದರೆ, ಕೊನೆಯ ಹಂತಕದಲ್ಲಿ ಲುಲಾ ಡಾ ಸಿಲ್ವಾ ವಿಜಯ ಭೇರಿ ಬಾರಿಸಿದ್ದಾರೆ.
ಸಾವೊ ಪಾಲೊದಲ್ಲಿ ವಿಜಯ ಭಾಷಣ ಮಾಡಿದ ಡಾ ಸಿಲ್ವಾ, ‘ಇಂದು ಬ್ರೆಜಿಲ್‌ನ ಜನರು ವಿಜೇತರಾಗಿದ್ದಾರೆ. ಇದು ನನ್ನ ಅಥವಾ ವರ್ಕರ್ಸ್ ಪಾರ್ಟಿಯ ವಿಜಯವಲ್ಲ ಅಥವಾ ಚುನಾವಣಾ ಪ್ರಚಾರದಲ್ಲಿ ಬೆಂಬಲಿಸಿದ ಪಕ್ಷಗಳದ್ದಲ್ಲ. ಇದು ರಾಜಕೀಯ ಪಕ್ಷಗಳು, ವೈಯಕ್ತಿಕ ಹಿತಾಸಕ್ತಿ ಮತ್ತು ಸಿದ್ಧಾಂತಗಳ ಮೇಲೆ ರೂಪುಗೊಂಡ ಪ್ರಜಾಸತ್ತಾತ್ಮಕ ಚಳವಳಿಯ ವಿಜಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವಿಜಯ ಸಾಧಿಸಿದೆ ಎಂದಿರುವ ಡಾ ಸಿಲ್ವಾ ಅವರು ತಮ್ಮ ಎಡಪಂಥೀಯ ವರ್ಕರ್ಸ್ ಪಾರ್ಟಿ ಜನತೆಯ ಆಡಳಿತವಾಗಿರಲಿದೆ ಎಂದು ಭರವಸೆ ನೀಡಿದರು.
ಲುಲಾ ಡಾ ಸಿಲ್ವಾ ಅವರ ಮುಂದಿರುವ ದೊಡ್ಡ ಸವಾಲೆಂದರೆ ದೇಶವನ್ನು ಶಾಂತಿಗೊಳಿಸುವುದಾಗಿದೆ. ಇಲ್ಲಿನ ಜನರು ಕೇವಲ ರಾಜಕೀಯ ವಿಷಯಗಳಲ್ಲಿ ಧ್ರುವೀಕರಣಗೊಳ್ಳುವುದಿಲ್ಲ, ಆದರೆ ವಿಭಿನ್ನ ಮೌಲ್ಯಗಳು, ಗುರುತು ಮತ್ತು ಅಭಿಪ್ರಾಯಗಳನ್ನು ಹೊಂದಿದ್ದಾರೆ.
ಎಡಪಂಥೀಯ ವರ್ಕರ್ಸ್ ಪಾರ್ಟಿಯ ಲುಲಾ ಡಾ ಸಿಲ್ವಾ ಅವರು 12 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳು ಬ್ರೆಜಿಲ್ನಲ್ಲಿ ಅಧಿಕಾರದಲ್ಲಿದ್ದ ಬಲಪಂಥೀಯ ರಾಜಕೀಯ ಕೊನೆಗೊಂಡಿದೆ. ಲುಲಾ ಅವರು 2003 ರಿಂದ 2010 ರವರೆಗೆ ಬ್ರೆಝಿಲ್ ಅಧ್ಯಕ್ಷರಾಗಿದ್ದರು.
ಲುಲಾ ಡಾ ಸಿಲ್ವಾ 2002 ರಲ್ಲಿ ಬ್ರೆಜಿಲ್‌ನ ಮೊದಲ ಕಾರ್ಮಿಕ ವರ್ಗದ ಅಧ್ಯಕ್ಷರಾದರು. ಎರಡು ಅವಧಿಯ ನಂತರ 2010ರಲ್ಲಿ ಕೆಳಗಿಳಿದರು. ಆಗಲೂ ಅವರು 90% ರ ಸಮೀಪ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು.
ಬಡತನದಲ್ಲಿ ಜನಿಸಿದ ಲುಲಾ ಡಾ ಸಿಲ್ವಾ 1970 ರ ದಶಕದಲ್ಲಿ ಬ್ರೆಝಿಲ್‌ನ ಮಿಲಿಟರಿ ಸರಕಾರದ ವಿರುದ್ಧ ಮುಷ್ಕರಗಳನ್ನು ಆಯೋಜಿಸಿದ್ದರು. 77ರ ವಯಸ್ಸಿನ ಲುಲಾ ಬ್ರೆಝಿಲ್‌ನ ಕಾರ್ಮಿಕ ವರ್ಗದ ನಾಯಕರಾಗಿ ಬೆಳೆದವರು.
ಮೂರು ದಶಕಗಳ ನಂತರ ನಡೆದ ದೇಶದ ಅತ್ಯಂತ ಪೈಪೋಟಿಯ ಚುನಾವಣೆ ಇದಾಗಿದೆ. 2 ಮಿಲಿಯನ್ ಮತಗಳ ಅಂತರದಲ್ಲಿ ಲೂಲಾ ಡಾ ಸಿಲ್ವಾ ವಿಜಯ ಸಾಧಿಸಿದ್ದಾರೆ. ಜನವರಿ 1 ರಂದು ಲುಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.