ನವದೆಹಲಿ :ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಮಹಾದೇವಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ವೇಳೆ ಮತ ಕಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಹಾದೇವಪುರ
ಆಗಸ್ಟ್ 7ರಂದು ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಚುನಾವಣಾ ಆಯೋಗದ ಸಹಕಾರದೊಂದಿಗೆ ಬಿಜೆಪಿ ಐದು ರೀತಿಯಲ್ಲಿ ಮತಗಳ್ಳತನ ಮಾಡಿದೆ ಎಂದು ದಾಖಲೆಗಳೊಂದಿಗೆ ಆರೋಪಿಸಿದ್ದಾರೆ.
“ನಮ್ಮ ಸಂವಿಧಾನದ ಅಡಿಪಾಯವೇ ಒಂದು ವ್ಯಕ್ತಿಗೆ ಒಂದು ಮತ. ಆದರೆ ಭಾರತದ ಚುನಾವಣೆಗಳ ಬಗ್ಗೆ ನೋಡಿದಾಗ ಒಂದು ವ್ಯಕ್ತಿಗೆ ಒಂದು ಮತ ಭರವಸೆ ಎಷ್ಟು ಗಟ್ಟಿಯಾಗಿದೆ ಎಂಬುದೇ ಪ್ರಶ್ನೆಯಾಗಿದೆ. ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆಯಾ? ಮತದಾರರ ಪಟ್ಟಿ ಸರಿಯಾಗಿದೆಯಾ ಎಂಬುದು ಇದರಲ್ಲಿ ಮುಖ್ಯವಾಗುತ್ತದೆ,” ಎಂದು ಅವರು ವಿವರಿಸಿದ್ದಾರೆ.
“ತುಂಬಾ ಸಮಯದಿಂದ ಜನರಲ್ಲಿ ಒಂದು ಅನುಮಾನ ಇದೆ. ನಮ್ಮಲ್ಲೂ ಇದೆ. ಆಡಳಿತ ವಿರೋಧಿ ಅಲೆಗೆ ಎಲ್ಲಾ ಪಕ್ಷಗಳು ಗುರಿಯಾಗುತ್ತವೆ. ಆದರೆ ಒಂದು ಪಕ್ಷಕ್ಕೆ ಮಾತ್ರ ಇದು ಅನ್ವಯವಾಗುತ್ತಿಲ್ಲ. ಅದು ಬಿಜೆಪಿ. ಸಮೀಕ್ಷೆಗಳು, ಮತಗಟ್ಟೆ ಸಮೀಕ್ಷೆಗಳೇ ಒಂದು ಹೇಳುತ್ತಿರುತ್ತವೆ. ಆದರೆ ಫಲಿತಾಂಶವೇ ಬೇರೆ ಬರುತ್ತೆ. ಇದನ್ನು ನಾವು ನೋಡುತ್ತಿದ್ದೇವೆ,” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.

ಮಹದೇವಪುರದಲ್ಲಿ ಮತಗಳ್ಳತನ
2024ರ ಲೋಕಸಭಾ ಚುನಾವಣೆಯಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದಲ್ಲಿ ‘ಮತ ಕಳ್ಳತನ’ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ‘ವೋಟ್ ಚೋರಿ’ ಶೀರ್ಷಿಕೆಯಡಿ ವಿವರವಾದ ವರದಿಯನ್ನು ಅವರು ಬಿಡುಗಡೆ ಮಾಡಿದ್ದು, ವ್ಯವಸ್ಥಿತವಾಗಿ ಚುನಾವಣಾ ಅಕ್ರಮ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ.
ಅವರ ಪ್ರಕಾರ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1,00,250 ಮತಗಳನ್ನು ಅಕ್ರಮವಾಗಿ ಸೇರಿಸಲಾಗಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ :ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಗೆ ಪತ್ರ ಬರೆದ ಮೂರನೇ ದೂರುದಾರ
ರಾಹುಲ್ ತಮ್ಮ ತನಿಖಾ ವರದಿಯಲ್ಲಿ ಐದು ಪ್ರಮುಖ ವಿಧಾನಗಳ ಮೂಲಕ ಮತ ಕಳ್ಳತನ ನಡೆದಿದೆ ಎಂದು ವಿವರಿಸಿದ್ದಾರೆ.
- ನಕಲಿ ಮತದಾರರು, ಅಂದರೆ ಒಬ್ಬನೇ ವ್ಯಕ್ತಿಯ ಹೆಸರು ಮತ್ತು ವಿವರಗಳು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. ಕೆಲವೊಮ್ಮೆ ಒಂದೇ ವ್ಯಕ್ತಿಗೆ ಬೆಂಗಳೂರಿನ ಜೊತೆಗೆ ಮುಂಬೈ, ಲಕ್ನೋದಂತಹ ಬೇರೆ ರಾಜ್ಯಗಳಲ್ಲೂ ಮತದಾನದ ಹಕ್ಕು ನೀಡಲಾಗಿದೆ. ಅಂಥಹವರು 11,965 ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
- ನಕಲಿ ಮತ್ತು ಅಮಾನ್ಯ ವಿಳಾಸಗಳನ್ನು ನೀಡಿರುವುದು ಅವರ ಇನ್ನೊಂದು ಆರೋಪ. ಮತದಾರರ ವಿಳಾಸದ ಜಾಗದಲ್ಲಿ ‘0’ ಅಥವಾ ಅಸ್ತಿತ್ವದಲ್ಲಿಲ್ಲದ ವಿಳಾಸಗಳನ್ನು ನಮೂದಿಸಿ ಸಾವಿರಾರು ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿದ್ದಾರೆ.
- ಒಂದೇ ವಿಳಾಸದಲ್ಲಿ ಬೃಹತ್ ಸಂಖ್ಯೆಯ ಮತದಾರರು ಅಂದರೆ, ಸಣ್ಣ ಮನೆ ಅಥವಾ ವಾಣಿಜ್ಯ ಮಳಿಗೆಯ ವಿಳಾಸದಲ್ಲಿ 50 ರಿಂದ 80ಕ್ಕೂ ಹೆಚ್ಚು ಮತದಾರರನ್ನು ನೋಂದಣಿ ಮಾಡಲಾಗಿದೆ. ಉದಾಹರಣೆಗೆ, ಒಂದು ಬ್ರೂವರಿಯ ವಿಳಾಸದಲ್ಲಿ 68 ಮತದಾರರು ಇರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ 10,452 ಮತದಾರರು ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
- ಅಮಾನ್ಯ ಫೋಟೋಗಳು ಅಂದರೆ ಮತದಾರರ ಗುರುತು ಪತ್ತೆಹಚ್ಚಲು ಸಾಧ್ಯವಾಗದಷ್ಟು ಚಿಕ್ಕದಾದ ಅಥವಾ ಅಸ್ಪಷ್ಟವಾದ ಫೋಟೋಗಳನ್ನು ಬಳಸಲಾಗಿದೆ. ಇಂಥಹ 4,132 ಮತದಾರರು ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
- ಫಾರ್ಮ್-6ರ ದುರ್ಬಳಕೆ ಅಂದರೆ, ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್-6 ಅನ್ನು ದುರ್ಬಳಕೆ ಮಾಡಿಕೊಂಡು, ಈಗಾಗಲೇ ಮತದಾರರಾಗಿರುವವರನ್ನು ಮತ್ತೆ ಹೊಸದಾಗಿ ನೋಂದಣಿ ಮಾಡಲಾಗಿದೆ. ಇಂಥಹ 33,692 ಪ್ರಕರಗಳು ನಮಗೆ ಸಿಕ್ಕಿವೆ. 70 ವರ್ಷದ ಮಹಿಳೆಯೊಬ್ಬರನ್ನು ಎರಡು ತಿಂಗಳ ಅಂತರದಲ್ಲಿ ಎರಡು ಬಾರಿ ನೋಂದಣಿ ಮಾಡಿ, ಎರಡೂ ಕಡೆ ಮತ ಚಲಾಯಿಸಿರುವ ಬಗ್ಗೆ ವರದಿಯಲ್ಲಿ ದಾಖಲೆ ಸಮೇತ ವಿವರಿಸಲಾಗಿದೆ.
ಇದನ್ನೂ ನೋಡಿ : ಮಹಾದೇವಪುರದಲ್ಲಿ 1 ಲಕ್ಷ ಅಕ್ರಮ ಮತ, ಸ್ಫೋಟಕ ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
