ಬೆಂಗಳೂರು: ಪ್ರಸಕ್ತ 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಕಳೆದ ಮೂರು ವರ್ಷಗಳ ಚಟುವಟಿಕೆಗಳನ್ನು ಅವಲೋಕಿಸಿದ ನಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ವರ್ಷ ಬೇಗನೇ ಆರಂಭಿಸಿದರೆ ಕಲಿಸಲು ಹೆಚ್ಚು ಸಮಯ ಸಿಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ವಿವಿಧ ಮಾದರಿಯ ಕೋವಿಡ್ ರೂಪಾಂತರಿ ವೈರಸ್‌ಗಳ ಬೆಳವಣಿಗೆಯಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಸರ್ಕಾರದಿಂದ ಕೆಲವು ಮಾರ್ಗಸೂಚಿಗಳು ಜಾರಿಯಾಗುತ್ತಿವೆ. ಅದರಂತೆ, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಲಾಕ್‌ಡೌನ್ ಘೋಷಣೆಯಾಗಬಹುದೆಂಬ ಆತಂಕವೂ ಎದುರಾಗಿದೆ.
ಇದರ ನಡುವೆ, ಶಾಲಾ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಬೇಗನೇ ಶಾಲೆಗಳನ್ನು ಆರಂಭಿಸಬಾರದೆಂಬುದು ಪೋಷಕರ ಅಭಿಪ್ರಾಯವಾಗಿದೆ.
ಶಿಕ್ಷಣ ಇಲಾಖೆ ಸೂಚನೆಗೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಪ್ರವೇಶ ಶುಲ್ಕ ತೆತ್ತು, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್‌ಡೌನ್ ಘೋಷಿಸುತ್ತಾರೆ. ಲಾಕ್‌ಡೌನ್ ಹೇರಿಕೆ ಕಾರಣಕ್ಕೆ ಆನ್ಲೈನ್ ತರಗತಿ ಆರಂಭಿಸುತ್ತಾರೆ. ಇದು ದೊಡ್ಡ ಹುನ್ನಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಶಾಲೆ ಆರಂಭವಾದರೂ ನಾವು ಮಕ್ಕಳನ್ನು ಕಳಿಸುವುದಿಲ್ಲ ಎಂದು ಹಲವು ಪೋಷಕರು ಹೇಳಿದ್ದಾರೆ. ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ ಎಂದು ದೂರುತ್ತಿರುವ ಕೆಲ ಪೋಷಕರು, ಇನ್ನೂ 15 ದಿನ ಅಥವಾ 1 ತಿಂಗಳು ಕಾದು ನೋಡಿದ ಬಳಿಕ ಶಾಲೆ ತೆರೆಯಬೇಕಿತ್ತು. ಮೊದಲು ಶಾಲೆಗಳನ್ನು ಆರಂಭಿಸುವ ದಿನಾಂಕ ಬದಲಿಸಬೇಕು. ಕೋವಿಡ್ ಸ್ಥಿತಿಗತಿ ನೋಡಿ ಶಾಲೆ ಆರಂಭಿಸಿದ್ದರೆ ಒಳ್ಳೆಯದಿತ್ತು ಎಂಬುದು ಪೋಷಕರ ಅಭಿಪ್ರಾಯವಾಗಿದೆ.
ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದ್ದು, ಮಕ್ಕಳ ಕಲಿಕೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ. ಅದರೊಂದಿಗೆ ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.
ಕಳೆದ 3 ವರ್ಷಗಳ ಶೈಕ್ಷಣಿಕ ಅವಧಿಯಲ್ಲಿ ಶೇಕಡಾ 50-60ರಷ್ಟು ಮಾತ್ರ ಭೌತಿಕ ಕಲಿಕೆ ಆಗಿದೆ. 2019-20, 2020-21, 2021-22ನೇ ಸಾಲಿನಲ್ಲಿ ಮಕ್ಕಳ ಕಲಿಕೆಗೆ ಧಕ್ಕೆಯಾಗಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆ ಆಗಿಲ್ಲ. ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ.
ಕೋವಿಡ್ ಪಿಡುಗಿನ ಕಾರಣದಿಂದಾಗಿ ಭೌತಿಕ ತರಗತಿಗಳಿಗೆ ಬದಲಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗಿತ್ತು. ಆದರೆ ಈ ಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಆಗಿರಲಿಲ್ಲ. ಈ ವರ್ಷದಿಂದಾದರೂ ಪರಿಣಾಮಕಾರಿ ಶಿಕ್ಷಣ ನೀಡಬೇಕು ಎಂದು ಶಿಕ್ಷಣ ಇಲಾಖೆ ನಿರ್ಧಾರವಾಗಿದೆ.