ಬೆಂಗಳೂರು: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಲಸಿಕಾಕರಣಕ್ಕೆ ಹೆಚ್ಚಿನ ವೇಗ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸರು ಹಾಜರಿರಬೇಕು ಎಂದು ಸರ್ಕಾರ ಸೂಚನೆ ನೀಡಲಾಗಿತ್ತು.
ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡಿಕೆಯನ್ನು ಮತ್ತಷ್ಟು ಚುರುಕುಗೊಳಿಸಲು ಸೂಚನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರೆಲ್ಲಾ ಮೊದಲ ಲಸಿಕೆ ಪಡೆದು ಎರಡನೆ ಡೋಸ್ ಇನ್ನೂ ತೆಗೆದುಕೊಂಡಿಲ್ಲವೋ ಅವರಿಗೆ ಮಾಹಿತಿ ನೀಡಿ ಆಧ್ಯತೆ ಮೇರೆಗೆ ಲಸಿಕೆ ನೀಡಬೇಕು. ಲಸಿಕಾ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿ, ಆದಷ್ಟು ಬೇಗ ಶೇ.100 ರಷ್ಟು ಪ್ರಮಾಣದಲ್ಲಿ ಅರ್ಹತೆಗೆ ತಕ್ಕಂತೆ ಲಸಿಕೆ ನೀಡುವ ಗುರಿ ತಲುಪುವಂತೆ ಮುನ್ನಡೆಯಿರಿ ಎಂದು ಜಿಲ್ಲಾಡಳಿತಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ತುಮಕೂರು, ಬೀದರ್, ಚಿತ್ರದುರ್ಗ, ಕೋಲಾರ, ವಿಜಯಪುರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ ಸೇರಿದಂತೆ ಒಟ್ಟು 18 ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಲಾಗಿದೆ.
ರಾಜ್ಯದಲ್ಲಿ ಕೊರೊನಾ 3ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಕೋವಿಡ್ ಲಸಿಕಾಕರಣದ ಪ್ರಗತಿ ಮತ್ತು ಕೋವಿಡ್ ಸ್ಥಿತಿಗತಿ ಕುರಿತು ಚರ್ಚೆ ನಡೆದಿದೆ. ಎರಡನೇ ಡೋಸ್ ಪ್ರಗತಿ ಕಡಿಮೆ ಇರುವ ಜಿಲ್ಲಾಡಳಿತಗಳ ಪ್ರತಿಕ್ರಿಯೆ ತಿಳಿದು, ಅಗತ್ಯ ಸೂಚನೆ ನೀಡಿದ್ದಾರೆ.
ಆರ್.ಟಿ ನಗರ ನಿವಾಸದಿಂದ ವರ್ಚುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಭಾಗಿಯಾದರು. ಆರೋಗ್ಯ ಸೌಧದಿಂದ ಆರೋಗ್ಯ ಸಚಿವ ಸುಧಾಕರ್ ಸಭೆಯಲ್ಲಿ ಭಾಗಿಯಾಗಿದ್ದರು.