ಲಖೀಂಪುರ ಖೇರಿ ಹಿಂಸಾಚಾರ: ನ್ಯಾಯಾಲಯದ ಮುಂದೆ ಶರಣಾದ ಆಶಿಶ್‌ ಮಿಶ್ರಾ

ಲಖೀಂಪುರ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ್ದು, ಅದರಂತೆ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಇಂದು(ಏಪ್ರಿಲ್‌ 24) ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಏಪ್ರಿಲ್ 18 ರಂದು ಸುಪ್ರೀಂ ಕೋರ್ಟ್ ಆಶಿಶ್ ಮಿಶ್ರಾಗೆ ನೀಡಲಅಗಿದ್ದ ಜಾಮೀನನ್ನು ರದ್ದುಗೊಳಿಸಿತ್ತು ಮತ್ತು ಒಂದು ವಾರದಲ್ಲಿ ಶರಣಾಗುವಂತೆ ಸೂಚಿಸಿತ್ತು.

”ಆಶಿಶ್ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ನಮಗೆ ಒಂದು ವಾರದ ಗಡುವು ಸೋಮುವಾರ ಮುಗಿಯುವುದಿತ್ತು. ಆದರೆ, ಅವರು ಒಂದು ದಿನ ಮುಂಚಿತವಾಗಿ ಶರಣಾಗಿದ್ದಾರೆ” ಎಂದು ಆಶಿಶ್ ಪರ ವಕೀಲ ಅವದೇಶ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಆಶಿಶ್‌ನನ್ನು ಜೈಲಿನಲ್ಲಿ ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಲಾಗುವುದು ಎಂದು ಜೈಲು ಅಧೀಕ್ಷಕ ಪಿ ಪಿ ಸಿಂಗ್ ತಿಳಿಸಿದ್ದಾರೆ.

2021ರ ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಈ ಪ್ರದೇಶಕ್ಕೆ ಭೇಟಿ ನೀಡುವುದನ್ನು ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಭುಗಿಲೆದ್ದ ಹಿಂಸಾಚಾರದಲ್ಲಿ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಪರಿಣಾಮ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿತ್ತು. ಅಂದು ಹಿಂಸಾಚಾರ ಘಟನೆಯಲ್ಲಿ ಒಟ್ಟು ಎಂಟು ಜನರು ಸಾವನ್ನಪ್ಪಿದ್ದರು.

ಸತ್ತವರಲ್ಲಿ ರೈತರು ಮತ್ತು ಪತ್ರಕರ್ತರು ಸೇರಿದ್ದಾರೆ, ಬಿಜೆಪಿ ಕಾರ್ಯಕರ್ತರನ್ನು ಹೊತ್ತೊಯ್ಯುತ್ತಿದ್ದ ಕಾರುಗಳಿಂದ ಹೊಡೆದುರುಳಿಸಲಾಗಿದೆ ಎಂಬ ಆರೋಪವಿದೆ. ಪ್ರಕರಣದ ಎಫ್‌ಐಆರ್ ಪ್ರಕಾರ, ಆಶಿಶ್ ಕಾರಿನಲ್ಲಿ ಕುಳಿತಿದ್ದರು. ನಂತರ ಪೊಲೀಸರು ಆಶಿಶ್‌ನನ್ನು ಬಂಧಿಸಿದ್ದರು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಅವರಿಗೆ ನಿಯಮಿತ ಜಾಮೀನು ನೀಡಿತ್ತು.

ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸಂತ್ರಸ್ತರಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ “ನ್ಯಾಯಯುತ ಮತ್ತು ಪರಿಣಾಮಕಾರಿ ವಿಚಾರಣೆ” ನಿರಾಕರಿಸಲಾಗಿದೆ ಎಂದು ಹೇಳಿದೆ, ಅದು “ಸಾಕ್ಷ್ಯದ ಸಮೀಪದೃಷ್ಟಿ ದೃಷ್ಟಿಕೋನ” ವನ್ನು ಅಳವಡಿಸಿಕೊಂಡಿದೆ. ಮೇಲ್ಮನವಿ ಅಥವಾ ಪರಿಷ್ಕರಣೆಯಲ್ಲಿ ತನಿಖೆಯ ಹಂತದಿಂದ ವಿಚಾರಣೆಯ ಪರಾಕಾಷ್ಠೆಯ ತನಕ ಸಂತ್ರಸ್ತರಿಗೆ ಅನಿಯಂತ್ರಿತ ಭಾಗವಹಿಸುವ ಹಕ್ಕುಗಳಿವೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.

Donate Janashakthi Media

Leave a Reply

Your email address will not be published. Required fields are marked *