ಗುರ್ಗಾಂವ್: ಮಹಾತ್ಮ ಗಾಂಧಿಜೀ ಹಂತಕ ನಾಥುರಾಮ್ ಗೋಡ್ಸೆಯನ್ನು ಖಂಡಿಸುವಂತೆ ವಿಶ್ವ ಹಿಂದೂ ಪರಿಷತ್ಗೆ ಏಕವ್ಯಕ್ತಿ ಹಾಸ್ಯ ಕಾರ್ಯಕ್ರಮಗಳನ್ನು ಮಾಡುವ ಕುನಾಲ್ ಕಾಮ್ರಾ ಸವಾಲು ಹಾಕಿದ್ದಾರೆ. ಈ ಬಗ್ಗೆ ವಿವರವಾದ ಬಹಿರಂಗ ಪತ್ರವನ್ನು ಬರೆದಿರುವ ಅವರು ವಿಹೆಚ್ಪಿಯವರ ನಡೆಯನ್ನು ಖಂಡಿಸಿದ್ದಾರೆ.
ಗುರುಗ್ರಾಮ್ನಲ್ಲಿ ಸೆಪ್ಟೆಂಬರ್ 17 ರಂದು ನಡೆಯಬೇಕಿದ್ದ ಕುನಾಲ್ ಕಾಮ್ರಾ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ರದ್ದುಪಡಿಸುವಂತೆ ಆಗ್ರಹಿಸಿದ ಕೂಡಲೇ ಕಾರ್ಯಕ್ರಮ ರದ್ದಾಗಿದೆ. ಈ ಬೆನ್ನಲ್ಲೆ ಕುನಾಲ್ ಕಮ್ರಾ ಬಲಪಂಥೀಯ ಹಿಂದೂ ಸಂಘಟನೆಗೆ ಹಿಂದಿಯಲ್ಲಿ ಬಹಿರಂಗ ಪತ್ರ ಬರೆದು, ಕಟುವಾಗಿ ಟೀಕಿಸಿದ್ದಾರೆ. ಜೊತೆಗೆ ತಾನು ವಿಎಚ್ಪಿಗಿಂತ “ದೊಡ್ಡ ಹಿಂದೂ” ಎಂದು ಘೋಷಿಸಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ, ವಿಎಚ್ಪಿಯು ಗುರುಗ್ರಾಮ್ನ ಉಪ ಆಯುಕ್ತರಿಗೆ ನಿಗದಿಯಾಗಿರುವ ಕುನಾಲ್ ಕಾಮ್ರಾ ಪ್ರದರ್ಶನವನ್ನು ರದ್ದುಗೊಳಿಸುವಂತೆ ಪತ್ರವನ್ನು ಸಲ್ಲಿಸಿತ್ತು. ಬಜರಂಗದಳವು ಅವರು, ನಿರ್ದಿಷ್ಟ ಧರ್ಮದ ಬಗ್ಗೆ ಹಾಸ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು. ಕಾರ್ಯಕ್ರಮ ಆಯೋಜಕರಿಗೂ ಮನವಿ ಮಾಡಿಕೊಂಡಿದ್ದರು.
ಇದರ ನಂತರದ ಬೆಳವಣಿಗೆಯಲ್ಲಿ ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರದರ್ಶನವನ್ನು ರದ್ದುಗೊಳಿಸುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಕುನಾಲ್ ಕಾಮ್ರಾ ಹಂಚಿಕೊಂಡಿರುವ ಪತ್ರ ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ. ಅಲ್ಲದೆ ಅವರು ಪತ್ರದಲ್ಲಿ ವಿಎಚ್ಪಿಯನ್ನು ಕೇವಲ “ಹಿಂದೂ ಪರಿಷತ್” ಎಂದು ಸಂಬೋಧಿಸಿದ್ದಾರೆ, ಅವರ ಪ್ರಕಾರ, ಪ್ರಪಂಚದಾದ್ಯಂತದ ಹಿಂದೂಗಳು ಅದನ್ನು ತಮ್ಮ ಗುತ್ತಿಗೆದಾರ ಎಂದು ಅನುಮತಿ ನೀಡಿಲ್ಲ ಎಂದಿದ್ದಾರೆ.
”ನಾನು ಹೆಮ್ಮೆಯಿಂದ ಜೈ ಶ್ರೀ ಸೀತಾ-ರಾಮ್ ಮತ್ತು ರಾಧಾ-ಕೃಷ್ಣ ಎಂದು ಹೇಳಬಲ್ಲೆ. ನೀವು ನಿಜವಾಗಿಯೂ ಭಾರತೀಯರಾಗಿದ್ದರೆ, ಗೋಡ್ಸೆ ಮುರ್ದಾಬಾದ್ ಹೇಳುವ ಧೈರ್ಯವನ್ನು ತೋರಿಸಿ. ಇಲ್ಲದಿದ್ದರೆ ನಾವು ನಿಮ್ಮನ್ನು ಹಿಂದೂ ವಿರೋಧಿ ಮತ್ತು ಭಾರತೀಯ ವಿರೋಧಿ ಎಂದು ಪರಿಗಣಿಸುತ್ತೇವೆ” ಎಂದು ಕುನಾಲ್ ಕಮ್ರಾ ಪತ್ರದಲ್ಲಿ ಬರೆದಿದ್ದಾರೆ.
ನಾನು ಭಯ ಹುಟ್ಟಿಸುವ ಮತ್ತು ಬೆದರಿಕೆಗಳನ್ನು ನೀಡುವ ಮೂಲಕ ತನ್ನ ಜೀವನಕ್ಕೆ ಸಂಪಾದಿಸುವುದಿಲ್ಲ ಎಂದು ವ್ಯಂಗ್ಯವಾಡಿರುವ ಅವರು, ತಾನು ಹಿಂದೂ ಸಂಸ್ಕೃತಿಯನ್ನು ಅವಮಾನಿಸುತ್ತಿರುವ ಯಾವುದೇ ವಿಡಿಯೋ ಕ್ಲಿಪ್ ಇದ್ದರೆ ಅದನ್ನು ತನಗೆ ತೋರಿಸಿ ಎಂದು ವಿಎಚ್ಪಿಗೆ ಸವಾಲು ಹಾಕಿದ್ದಾರೆ.
“ನೀವು ಗೋಡ್ಸೆಯನ್ನು ದೇವರೆಂದು ಪರಿಗಣಿಸುತ್ತೀರಿ ಎಂದು ನನಗೆ ಹೇಳುವುದಿಲ್ಲವೇ? ಅದು ನಿಜವಾಗಿದ್ದರೆ, ಭವಿಷ್ಯದಲ್ಲಿ ನನ್ನ ಪ್ರದರ್ಶನಗಳನ್ನು ರದ್ದುಗೊಳಿಸುವುದನ್ನು ಮುಂದುವರಿಸಿ. ಈ ಪರೀಕ್ಷೆಯಲ್ಲಿ ನಿಮಗಿಂತ ದೊಡ್ಡ ಹಿಂದೂವಾಗಿ ಹೊರಹೊಮ್ಮಿದ್ದಕ್ಕೆ ನನಗೆ ಸಂತೋಷವಾಗುತ್ತದೆ. ನಾನು ಏನು ಮಾಡುತ್ತೇನೆ, ನಾನು ನಿಮಗಿಂತ ದೊಡ್ಡ ಹಿಂದೂ ಎಂದು ನಾನು ಕಷ್ಟಪಟ್ಟು ಸಂಪಾದಿಸಿದ ರೊಟ್ಟಿಯನ್ನು ತಿನ್ನುತ್ತೇನೆ. ಯಾರಿಗಾದರೂ ಬೆದರಿಕೆ ಹಾಕುವ ಮೂಲಕ ಮತ್ತು ಭಯವನ್ನು ಹರಡುವ ಮೂಲಕ ಬದುಕುವುದು ಪಾಪ ಎಂದು ನಾನು ಭಾವಿಸುತ್ತೇನೆ ”ಎಂದು ಕಮ್ರಾ ಹಿಂದಿಯಲ್ಲಿ ಬರೆದು ವಿಎಚ್ಪಿಯ ಅಧಿಕೃತ ಟ್ವಿಟರ್ ಗೆ ಟ್ಯಾಗ್ ಮಾಡಿದ್ದಾರೆ.
ಗುರುಗ್ರಾಮ್ನ ಸೆಕ್ಟರ್ 29 ನಲ್ಲಿರುವ ಸ್ಟುಡಿಯೋ ಕ್ಸೋ ಬಾರ್ನಲ್ಲಿ ಕುನಾಲ್ ಕಮ್ರಾ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.