ಪ್ರಧಾನಿ ಸ್ವಾಗತಕ್ಕೆ ಟಾರ್ ಹಾಕಿದ್ದ ರಸ್ತೆ 10 ದಿನದಲ್ಲಿ ಹಾಳು!

ಮಂಗಳೂರು: ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚುವ ಸಲುವಾಗಿ ಹಾಕಿದ್ದ ಡಾಂಬರು ಹತ್ತೇ ದಿನಗಳಲ್ಲಿ ಕಿತ್ತುಹೋಗಿದೆ.

ನವಮಂಗಳೂರು ಬಂದರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಸೆ.2ರಂದು ನಗರಕ್ಕೆ ಭೇಟಿ ನೀಡಿದ್ದರು.

ಬಂಗ್ರಕೂಳೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಮೋದಿ ಅವರು ನವಮಂಗಳೂರು ಬಂದರಿನಿಂದ ರಸ್ತೆ ಮಾರ್ಗವಾಗಿ ಸಂಚರಿಸಿದ್ದರು. ಅವರು ಸಾಗುವ ರಸ್ತೆಯಲ್ಲಿದ್ದ ಗುಂಡಿಗಳನ್ನು ಕಾರ್ಯಕ್ರಮಕ್ಕೆ ಎರಡು ದಿನಗಳಿಗೆ ಮುಂಚಿತವಾಗಿ ಮುಚ್ಚಿ, ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಈ ಹೆದ್ದಾರಿಯಲ್ಲಿ, ಕೂಳೂರು ಸೇತುವೆ ಮೇಲೆ ಮತ್ತೆ ಗುಂಡಿಗಳು ಕಾಣಿಸಿಕೊಂಡಿವೆ.

‘ಕೂಳೂರು ಹಾಗೂ ಪಣಂಬೂರು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣವಾಗಿದ್ದ ಗುಂಡಿಗಳನ್ನು ಮುಚ್ಚಲು ನಾಲ್ಕು ತಿಂಗಳಿನಿಂದ ಜನ ಒತ್ತಾಯಿಸಿದ್ದರು. ಆದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಗುಂಡಿ ಮುಚ್ಚಲು ಕ್ರಮ ಕೈಗೊಂಡಿರಲಿಲ್ಲ. ಪ್ರಧಾನಿ ಬರುವ ಕಾರ್ಯಕ್ರಮ ನಿಗದಿಯಾದ ನಾಲ್ಕೇ ದಿನಗಳಲ್ಲಿ ಇಲ್ಲಿನ ರಸ್ತೆಗಳ ಚಿತ್ರಣವೇ ಬದಲಾಗಿತ್ತು. ಡಾಂಬರೀಕರಣ ನಡೆಸಿದ ಹತ್ತೇ ದಿನಗಳಲ್ಲೇ ಹೆದ್ದಾರಿಯಲ್ಲಿ ಮತ್ತೆ ಗುಂಡಿ ನಿರ್ಮಾಣವಾಗುವ ಮೂಲಕ ಈ ಕಾಮಗಾರಿಯ ಅಸಲಿಯತ್ತು ಕೂಡ ಬಟಾಬಯಲಾಗಿದೆ’ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.

‘ಕುಡಿಯುವ ನೀರಿನ ಕೊಳವೆ ಕಾಮಗಾರಿಯಿಂದಾಗಿ ಕೂಳೂರು ಪ್ರದೇಶದಲ್ಲಿ ರಸ್ತೆ ಹದಗೆಟ್ಟಿತ್ತು. ಪ್ರಧಾನಿಯವರು ನಗರಕ್ಕೆ ಭೇಟಿ ನೀಡುವಾಗ ರಸ್ತೆ ಗುಂಡಿಗಳನ್ನು ಹಾಗೆಯೇ ಬಿಡುವುದು ಸರಿಯಲ್ಲ ಎಂಬ ಕಾರಣಕ್ಕೆ ನಾವು ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಂಡಿದ್ದೆವು. ಈ ಹೆದ್ದಾರಿಯಲ್ಲಿ ಮತ್ತೆ ಗುಂಡಿ ಕಾಣಿಸಿಕೊಂಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ‘ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

1952 ರಲ್ಲಿ ನಿರ್ಮಾಣವಾದ ಈ ಸೇತುವೆ ಇದೀಗ ಶಿಥಿಲವಾಗಿದ್ದು 2020 ರಲ್ಲಿ 2ತಿಂಗಳ ಕಾಲ ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಮಾಡಿ ಪುನಶ್ಚೇತನಗೊಳಿಸಲಾಗಿತ್ತು .ಒಂದಾರು ತಿಂಗಳು ನಂತರ ಮತ್ತೆ ರಸ್ತೆ ಹಾಳಾಗಿತ್ತು. ಪ್ರಧಾನಿ ಭೇಟಿ ನೀಡಿದಾಗ ಮತ್ತೆ ದುರಸ್ತಿ ಮಾಡಲಾಯಿತಾದರೂ ಅದು 10 ದಿನಕ್ಕೆ ಕಿತ್ತು ಹೋಗಿದೆ. ಪದೇ ಪದೇ ಈ ಜಾಗದಲ್ಲಿ ರಸ್ತೆ ಹಾಳಾದಷ್ಟು ಶಾಸಕರು, ಸಚಿವರು, ಲೋಕಸಭಾ ಸದಸ್ಯರು ಹಾಗೂ ಗುತ್ತಿಗೆದಾರರ ಹೊಟ್ಟೆ ತುಂಬುತ್ತಿದೆ ಹಾಗಾಗಿ ಕಳಪೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.

Donate Janashakthi Media

Leave a Reply

Your email address will not be published. Required fields are marked *