ಬೆಳಗಾವಿ : KSDL ಲಂಚ ಹಗರಣದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ, ಕೇಂದ್ರದಲ್ಲಿ 9 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಶಾಸಕರನ್ನು ಖರೀದಿ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ ಬಿಜೆಪಿ ಲೂಟಿ ಹೊಡೆಯುವುದರಲ್ಲೇ ಕಾಲ ಕಳೆದಿದೆ. ಭ್ರಷ್ಟಚಾರಕ್ಕೆ ಬಿಜೆಪಿ ಮತ್ತು ಮುಖ್ಯಮಂತ್ರಿ ಸಾಕ್ಷ್ಯ ಕೇಳುತ್ತಿದ್ದಾರೆ. ಮಾಡಾಳು ವಿರೂಪಾಕ್ಷಪ್ಪನ ಪುತ್ರ ಪ್ರಶಾಂತ್ ಕೆಎಸ್‍ಡಿಎಲ್‍ನ ಟೆಂಡರ್ ಕೊಡಿಸಲು 80 ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆಯಿಟ್ಟು, 40 ಲಕ್ಷ ರೂಪಾಯಿ ಪಡೆಯುವಾಗ ಸಿಕ್ಕಿ ಬಿದ್ದಿದ್ದಾನೆ. ವಿರೂಪಾಕ್ಷಪ್ಪ ಯಡಿಯೂರಪ್ಪ ಅವರ ಕಟ್ಟಾ ಅನುಯಾಯಿ ಎಂದು ಆರೋಪಿಸಿದ್ದಾರೆ.
ವೈಖರಿಯೇಸ್ ಲಯಾಬಿಲಿಟಿ ರೀತಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಬೇಕು :
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಪ್ಪನ್ನು ಕೂಡ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪ್ರಶಾಂತ್ ಮಾಡಾಳ್‍ಗೆ ಸರ್ಕಾರಿ ನೌಕರ ಆತನಿಗೆ ಯಾರಾದರೂ ಸುಮ್ಮನೆ ಹಣ ಕೊಡುತ್ತಾರಾ. ಅವರ ಅಪ್ಪ ನಿಗಮದ ಅಧ್ಯಕ್ಷನಾಗಿದ್ದ ಎಂಬ ಕಾರಣಕ್ಕೆ ಮಗ ಲಂಚ ಪಡೆದಿದ್ದಾನೆ. ಗಾಡಿ ಓಡಿಸುವವನು ಚಾಲಕನಾಗಿದ್ದರೂ ಅಪಘಾತವಾದಾಗ ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದನ್ನು ವೈಖರಿಯೇಸ್ ಲಯಾಬಿಲಿಟಿ ಎಂದು ಕರೆಯುತ್ತಾರೆ. ಅದೇ ರೀತಿ ಈಗ ಶಾಸಕನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ಹಗರಣ ಬೆಳಕಿಗೆ ಬಂದಾಗಲೂ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಚಾರ ನಡೆದಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಮ್ಮ ಸರ್ಕಾರದ ಕಾಲದನ್ನು ಇಷ್ಟು ದಿನ ಏಕೆ ತನಿಖೆ ನಡೆಸಲಿಲ್ಲ. ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದಾರಾ ? ನಿಮ್ಮದು ಹೊರ ಬಂದಾಗ ನಮ್ಮ ಮೇಲೆ ದೂರು ಹೇಳುವುದು ಹಾಸ್ಯಾಸ್ಪದ ಎಂದರು.
ಇದನ್ನೂ ಓದಿ : ಲಂಚ ಸ್ವೀಕಾರ ಪ್ರಕರಣ : ಪ್ರಶಾಂತ್ ಮಾಡಾಳ್ ಸೇರಿ ಐವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಭ್ರಷ್ಟಾಚಾರದ ವಿರುದ್ಧದ ಹೋರಾಟ ಪ್ರಜಾಧ್ವನಿ ಯಾತ್ರೆಯ ಒಂದು ಭಾಗ :
ಬಿಜೆಪಿ ಪ್ರತಿಯೊಬ್ಬ ಸಚಿವ, ಶಾಸಕ, ನಿಗಮ ಮಂಡಳಿ ಅಧ್ಯಕ್ಷರಿಗೆ ಇಂತಿಷ್ಟು ಹಣ ವಸೂಲಿ ಮಾಡಿಕೊಡಬೇಕು ಎಂದು ಗುರಿ ನಿಗದಿ ಮಾಡಿದೆ. ಅದಕ್ಕಾಗಿಯೇ ಮಾಡಾಳು ವಿರೂಪಾಕ್ಷಪ್ಪನ ಮಗ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾನೆ. ಕಾಂಗ್ರೆಸ್ ಈ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ. ಪ್ರಜಾಧ್ವನಿ ಯಾತ್ರೆಯೂ ಅದರ ಒಂದು ಭಾಗ ಎಂದರು.
ಹಿಂದು-ಮುಸ್ಲಿಂ ನಡುವೆ ಕೋಮು ದ್ವೇಷ ತಂದಿಟ್ಟು ಗೆಲ್ಲಲು ಆಗಲ್ಲ. ಜನ ಬುದ್ದಿವಂತರಾಗಿದ್ದಾರೆ ಎಂದು ಅರ್ಥವಾದ ಬಳಿಕ ಬಿಜೆಪಿ ಈಗ ದುಡ್ಡಿನಲ್ಲಿ ಚುನಾವಣೆ ಗೆಲ್ಲಲು ನೋಡುತ್ತಿದೆ. ಅದಕ್ಕಾಗಿ ವ್ಯಾಪಕ ಭ್ರಷ್ಟಚಾರ ನಡೆಸಿ ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಮುಚ್ಚಿದ್ದೇವು ಎಂಬುದು ತಪ್ಪ, ಆಗಿನ ಲೋಕಾಯುಕ್ತರಾಗಿದ್ದ ಭಾಷ್ಕರ್ ರಾವ್ ಭ್ರಷ್ಟಚಾರ ಮಾಡಿದರು. ಅದಕ್ಕಾಗಿ ಕೇಂದ್ರ ಕಾನೂನು ಆಧರಿಸಿ ನಾವು ಎಸಿಬಿ ರಚನೆ ಮಾಡಿದ್ದೇವು. ಆದರೆ ಲೋಕಾಯುಕ್ತವನ್ನು ಮುಚ್ಚಿರಲಿಲ್ಲ. ನಮ್ಮಂತೆ ದೇಶದ 16 ರಾಜ್ಯಗಳಲ್ಲಿ ಎಸಿಬಿ ಇದೆ. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಗೋವಾ ಅಲ್ಲೆಲ್ಲಾ ಎಸಿಬಿ ಇದೆ. ಲೋಕಾಯುಕ್ತ ಇಲ್ಲ. ಇಲ್ಲೂ ಬಿಜೆಪಿ ಸರ್ಕಾರ ಲೋಕಾಯುಕ್ತವನ್ನು ಪುನರ್ ರಚನೆ ಮಾಡಿದ್ದಲ್ಲ. ಹೈಕೋರ್ಟ್ ಆದೇಶ ಮಾಡಿದ ಮೇಲೆ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ ಬಿಜೆಪಿಯ ಹೆಚ್ಚುಗಾರಿಕೆ ಏನು ಇಲ್ಲ ಎಂದು ಹೇಳಿದರು.
ನಾವು ಮಾಡಿದ ಕಾರ್ಯಕ್ರಗಳನ್ನು ಉದ್ಘಾಟಿಸಲು ಮೋದಿ, ಶಾ ಬರುತ್ತಿದ್ದಾರೆ :
ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದ ಯೋಜನೆಗಳನ್ನು ಬಿಜೆಪಿಯವರು ಉದ್ಘಾಟನೆ ಮಾಡಿ ಹೆಸರು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿಯನ್ನು ಕರೆಸಿ 52 ಸಾವಿರ ಜನರಿಗೆ ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ಕೊಡಿಸಲಾಗಿದೆ. ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರ, ಅದಕ್ಕಾಗಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿದ್ದು ನಾವು. ಅದಕ್ಕಾಗಿ ನರಸಿಂಹಯ್ಯ ಅವರ ಸಮಿತಿ ಮಾಡಿ, ವರದಿ ಪಡೆದು ನಂತರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಇವರು ಬಂದು ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ನಾವು ಮಾಡಿದ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್‍ರನ್ನು ಕರೆಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರಿ 14.54 ಲಕ್ಷ ಮನೆ ಕಟ್ಟಿತ್ತು. ಬಿಜೆಪಿ ಅಕಾರಕ್ಕೆ ಬಂದು ನಾಲ್ಕು ವರ್ಷವಾಯಿತು, ಹೊಸದಾಗಿ ಒಂದೇ ಒಂದು ಮನೆ ಕಟ್ಟಿಲ್ಲ. ಯಾವ ವರ್ಷ ಎಷ್ಟು ಮನೆ ಕಟ್ಟಿದ್ದೇವೆ ಎಂದು ಮಾಹಿತಿ ನೀಡಲಿ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಯತ್ನ ಮಾಡಬೇಡಿ ಎಂದು ಟೀಕಿಸಿದರು.