ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟ ಸಮಿತಿಯು ಕರೆ ನೀಡಿರುವ ಮುಷ್ಕರ ಬೆಂಬಲಿಸಿ ರಾಜ್ಯದಾದ್ಯಂತ ಇಂದು (ಶುಕ್ರವಾರ) ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಯಲಿದೆ.
ರಾಜ್ಯದಲ್ಲಿ ನಾಲ್ಕೈದು ತಿಂಗಳಲ್ಲಿ ಹಲವು ಬಾರಿ ಬಂದ್ಗೆ ಕರೆ ನೀಡಿ ಪ್ರತಿಭಟನೆ ಮಾಡಲಾಗಿದೆ. ಈ ಬಾರಿ ಬಂದ್ ಬದಲು ಶವಯಾತ್ರೆ ನಡೆಸಲು ಎಲ್ಲ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ. ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು, ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂಬುದು ಮುಷ್ಕರದ ಪ್ರಮುಖ ಬೇಡಿಕೆಯಾಗಿದೆ.
ವಿವಿಧ ಸಂಘಟನೆಗಳ ಬೆಂಬಲ: ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ರೈತರ ಈ ಮುಷ್ಕರಕ್ಕೆ ಕಾರ್ಮಕರು, ಕೂಲಿಕಾರರು, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ಅಟೋ, ಟ್ಯಾಕ್ಸಿ ಚಾಲಕರು, ಹೋಟೆಲ್ ಮಾಲಿಕರು ಸೇರಿದಂತೆ ಬಹಳಷ್ಟು ಸಂಘಟನೆಗಳು ಬೆಂಬಲವನ್ನು ಘೋಷಿಸಿವೆ. ಮುಷ್ಕರಕ್ಕೆ ಕಾಂಗ್ರೆಸ್, ಸಿಪಿಐಎಂ, ಸಿಪಿಐ, ಜೆಡಿಎಸ್, ಆಮ್ ಆದ್ಮಿ ಪಕ್ಷ, ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.