ಬೆಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದೊಂದು ಚಾರಿತ್ರಿಕ ವಿಜಯವಾಗಿದೆ. ಬಹು ಜನಾಭಿಪ್ರಾಯಕ್ಕೆ ಸಿಕ್ಕ ಮನ್ನಣೆ ಇದಾಗಿದೆ. ಈ ವಿಜಯವನ್ನು ಸಂಭ್ರಮದಿಂದ ಆಚರಿಸುವಾಗ, ಇದಕ್ಕಾಗಿ ಜೀವ ತೆತ್ತ ಸಾವಿರಾರು ಹುತಾತ್ಮ ನೇಗಿಲ ಯೋಗಿಗಳನ್ನು ಕೃತಜ್ಞತೆಯಿಂದ ಸ್ಮರಿಸಬೇಕಾಗುತ್ತದೆ ಎಂದು ಸಾಹಿತಿ, ಕಲಾವಿದರು, ಹೋರಾಟಗಾರರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐದು ರಾಜ್ಯಗಳ ಚುನಾವಣಾ ಹೊಸ್ತಿಲಲ್ಲಿ ನಿಂತು, ಈ ಘೋಷಣೆ ಮಾಡಿರುವುದರಿಂದ, ಪ್ರಧಾನಿಗೆ ತಮ್ಮ ತಪ್ಪಿನ ಅರಿವಾಗಿ ಸರಿಪಡಿಸಲು ಈ ಕ್ರಮಕ್ಕೆ ಮುಂದಾದರು ಎಂದು ಹೇಳಲಾಗುವುದಿಲ್ಲ. ರೈತರನ್ನುದ್ದೇಶಿಸಿ ಅವರು ಮಾಡಿರುವ ಕ್ಷಮಾಯಾಚನೆಯೂ ಔಪಚಾರಿಕವಾದುದು. ಸಾವಿರಾರು ರೈತರು ಜೀವಾರ್ಪಣೆ ಮಾಡಿದಾಗ ತೋರಿಸದ ವಿನಯ ಈಗ ಚುನಾವಣಾ ಸಂದರ್ಭದಲ್ಲಿ ಬಂದಿದೆ ಎಂಬುದು ಗಮನಾರ್ಹ.
ಇದನ್ನು ಓದಿ: ರೈತ ಹೋರಾಟಕ್ಕೆ ಸಂದ ಭಾರೀ ಜಯ: ಸಂಯುಕ್ತ ಹೋರಾಟ ಕರ್ನಾಟಕ ಹರ್ಷ
ಚಳುವಳಿ ನಿರತ ರೈತರು ಸಹ ತಮ್ಮ ಚಳುವಳಿಯನ್ನು ಕೂಡಲೇ ವಾಪಸ್ ಪಡೆಯುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಪಾರ್ಲಿಮೆಂಟಿನಲ್ಲಿ ಅಧಿಕೃತವಾಗಿ ವಾಪಸ್ಸು ಪಡೆದ ಬಳಿಕವೇ ಚಳುವಳಿ ನಿಲ್ಲಿಸುವುದಾಗಿ ಹೇಳಿದ್ದಾರೆ. ನಮ್ಮ ಪ್ರಧಾನಿಗಳ ಬರೀ ಮಾತಿನಲ್ಲಿ ಅವರಿಗೆ ನಂಬಿಕೆ ಇಲ್ಲ ಎಂಬ ವಿಚಾರ ಇದರಿಂದ ಸ್ಪಷ್ಟವಾಗುತ್ತದೆ. ಅದೇನೆ ಇರಲಿ, ಇದರಿಂದ ಒಂದು ವಿಚಾರ ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಅಭದ್ರಗೊಳಿಸಲು ಯಾರಿಗೂ ಸಾಧ್ಯವಿಲ್ಲ ಸರ್ವಾಧಿಕಾರವನ್ನು ಜನ ಸೈರಿಸುವುದಿಲ್ಲ. ಸರ್ವಾಧಿಕಾರ ಬಯಸುವವರಿಗೆ ತಡವಾಗಿಯಾದರೂ ಇದು ಸ್ಪಷ್ಟವಾಗಿ ಗೋಚರಿಸಬೇಕು. ಅಂದು ಇಂದಿರಾಜಿ, ಇಂದು ಮೋದೀಜಿ ಇದಕ್ಕೆ ಜ್ವಲಂತ ನಿದರ್ಶನವಾಗಿ ಚರಿತ್ರೆಯಲ್ಲಿ ದಾಖಲಾಗುತ್ತಾರೆ. ಇದರಿಂದ ನಮ್ಮ ಎಲ್ಲ ರಾಜಕೀಯ ನಾಯಕರೂ ಪಾಠಕಲಿಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸಾಂಸ್ಕೃತಿಕ ಸಾಹಿತ್ಯ ವಲಯದ, ಜನಮುಖೀ ಚಿಂತನೆಗಳನ್ನು ಹೊಂದಿದ ನಾವು ಸಶಕ್ತ ಹೋರಾಟದ ಅಂತ್ಯ ಜಯ ಎಂಬುದನ್ನು ಸಾಬೀತುಪಡಿಸಿದ ಅನ್ನದಾತರನ್ನು ಅಭಿನಂದಿಸುತ್ತೇವೆ. ಅದೇ ಸಂದರ್ಭದಲ್ಲಿ ಕೇಂದ್ರ ಸರಕಾರವು ವಿದ್ಯುತ್ ಕಾಯ್ದೆಯ ತಿದ್ದುಪಡಿಯನ್ನೂ ಹಿಂತೆಗೆದುಕೊಳ್ಳಲು, ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವ ಕಾನೂನನ್ನು ತಕ್ಷಣವೇ ಜಾರಿಗೆ ತರಲು ಹಾಗೂ ಕೃಷಿಕೂಲಿಕಾರರು ಮತ್ತು ರೈತರ ಸಾಲ ಮನ್ನಾ ಮಾಡಲು ಋಣ ಮುಕ್ತ ಕಾಯ್ದೆಯನ್ನು ತರಲು ಒತ್ತಾಯಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಕೃಷಿ ಕಾನೂನು ರದ್ದತಿಯು ರೈತರ ಸತ್ಯಾಗ್ರಹದಿಂದ ಅವರ ದುರಹಂಕಾರವನ್ನು ಸೋಲಿಸಿದೆ
ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರವು ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸುತ್ತೇವೆ. ಕೇಂದ್ರ ಸರಕಾರದ ಘೋಷಣೆಯಂತೆ ರಾಜ್ಯ ಸರಕಾರವೂ ಕೃಷಿ ಮಸೂದೆಗಳು ಮತ್ತು ಈ ಎಲ್ಲ ಕೃಷಿ ವಿರೋಧೀ ಮಸೂದೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಈ ಕೆಳಗೆ ಹೆಸರಿಸಲಾದ ಸಾಹಿತಿ, ಕಲಾವಿದರು, ಹೋರಾಟಗಾರರ ಒಮ್ಮತದ ಒತ್ತಾಯವಾಗಿದೆ.
ಪ್ರೋ.ಕೆ. ಮರುಳ ಸಿದ್ದಪ್ಪ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಆರ್.ಕೆ.ಹುಡಗಿ, ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್ ತರಿಕೆರೆ, ಪ್ರೊ.ಬಿ.ಕೆ.ಚಂದ್ರಶೇಖರ್, ಡಾ.ಚಂದ್ರ ಪೂಜಾರಿ, ಡಾ.ಹಿ.ಶಿ.ರಾಮಚಂದ್ರೇ ಗೌಡ, ಪ್ರೊ.ಕಾಳೇಗೌಡ ನಾಗವಾರ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಅಮರೇಶ್ ನುಗಡೋಣಿ. ವಿಮಲಾ.ಕೆ.ಎಸ್, ಕೆ.ನೀಲಾ, ಡಾ.ವಸುಂಧರಾ ಭೂಪತಿ, ಡಾ.ಪುರುಷೋತ್ತಮ ಬಿಳೀಮಲೆ, ಹೇಮಾ ಪಟ್ಟಣಶೆಟ್ಟಿ, ಅಬ್ದುಲ್ ಹೈ ತೋರಣಗಲ್ಲು, ಬಿ.ಸುರೇಶ್, ಪ್ರಭು ಖಾನಾಪುರೆ, ನಾ.ದಿವಾಕರ, ಡಾ.ಕೆ.ಷರೀಫಾ, ಕೇಸರೀ ಹರವೂ, ಟಿ.ಜಿ.ವಿಟ್ಠಲ್, ಅರವಿಂದ ಪಾಟೀಲ್, ಎಚ್.ಹುಸೇನಪ್ಪ, ಡಾ.ಕೇಶವ ಶರ್ಮಾ, ಶಾರದಾ ಗೋಪಾಲ, ನಾ.ದಿವಾಕರ, ಟಿ.ಸುರೇಂದ್ರ ರಾವ್, ಅಚ್ಯುತ, ಜೆ.ಲೋಕೇಶ್, ಡಾ.ವಡ್ಡಗೆರೆ ನಾಗರಾಜಯ್ಯ, ವೆಂಕಟೇಶ ಮೂರ್ತಿ, ಡಾ.ಬಿ.ಆರ್.ಮಂಜುನಾಥ್, ಡಾ.ಎನ್.ಗಾಯತ್ರಿ, ಪಿ.ಆರ್.ವೆಂಕಟೇಶ್, ಡಾ.ಲೀಲಾ ಸಂಪಿಗೆ, ದೇವೇಂದ್ರ ಗೌಡ, ಬಿ.ಶ್ರೀಪಾದ ಭಟ್, ಹೇಮಲತಾ ಮೂರ್ತಿ, ರೂಪಾ ಹಾಸನ, ವೀರ ಹನುಮಾನ್ ರಾಯಚೂರು, ಡಿ.ಎಚ್.ಕಂಬಳಿ ಸಿಂಧನೂರು, ಕೆ.ಪಿ.ಸುರೇಶ, ಡಿ.ಉಮಾಪತಿ, ರಾಜಾರಾಂ ತಲ್ಲೂರು, ಸ್ವರ್ಣ ಭಟ್, ಲಕ್ಷ್ಮಿ ಚಂದ್ರ ಶೇಖರ್, ರುದ್ರಪ್ಪ ಹುಣಗವಾಡಿ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.