ಬೆಂಗಳೂರು : ಹಲವು ದಿನಗಳಿಂದ ಬೆಲೆ ಕುಸಿತದಿಂದಾಗಿ ಕಂಗೆಟ್ಟಿರುವ ರೈತರ ರಕ್ಷಣೆಗಾಗಿ ಈರುಳ್ಳಿ (ಉಳ್ಳಾಗಡ್ಡಿ) ಹಾಗೂ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಕೆಪಿಆರ್‌ಎಸ್ ಆಗ್ರಹಿಸಿದೆ.
ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ :
ಈರುಳ್ಳಿ (ಉಳ್ಳಾಗಡ್ಡಿ) ಹಾಗೂ ಕೊಬ್ಬರಿ ಬೆಲೆಗಳು ತೀವ್ರವಾಗಿ ಕುಸಿದು ಮಾರುಕಟ್ಟೆ ಸಾಗಾಣೆ ಖರ್ಚು ಸಿಗದೇ ದಯನೀಯ ಸ್ಥಿತಿಯಲ್ಲಿ ಸಿಲುಕಿರುವ ಈರುಳ್ಳಿ ಹಾಗೂ ಕೊಬ್ಬರಿ ರೈತರನ್ನು ರಕ್ಷಿಸಲು ಕೂಡಲೇ ರಾಜ್ಯದಾದ್ಯಂತ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನುಆಗ್ರಹಿಸಿದೆ. ಐದು ಕ್ವಿಂಟಾಲ್ ಈರುಳ್ಳಿ ಗೆ ಕೇವಲ ಎರಡು ರೂಪಾಯಿ ಚೆಕ್ ಪಡೆದ ರೈತನ ನೋವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರವೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೌನವಾಗಿ ಇರುವುದು ಬಿಜೆಪಿ ಸರ್ಕಾರಗಳ ರೈತ ವಿರೋಧಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಕೆಪಿಆರ್‌ಎಸ್ ನ ಅಧ್ಯಕ್ಷರಾದ ಜಿಸಿ ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಕಿಡಿಕಾರಿದ್ದಾರೆ.
ಮುಂದುವರಿದು, ಈ ಹಿಂದಿನ ವರ್ಷಗಳಲ್ಲಿ ಸತತವಾಗಿ ಅತಿವೃಷ್ಟಿಗೆ ಬಲಿಯಾಗಿ ಬೆಳೆ ಕಳೆದುಕೊಂಡು ದೊಡ್ಡ ಪ್ರಮಾಣದ ಸಾಲಕ್ಕೆ ಸಿಲುಕಿದ್ದ ರೈತರು ಈಗ ಬೆಳೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಅತಿ ಕಡಿಮೆ ಗೆ ಕಳೆದುಕೊಳ್ಳುತ್ತಿದ್ದಾರೆ. ಈಗ ಸಿಗುತ್ತಿರುವ ದರ ಸಾಗಾಣೆ ವೆಚ್ಚಕ್ಕೂ ಸಾಲದಾಗಿದೆ. ಇಂತಹ ದಯನೀಯ ಸ್ಥಿತಿಯಿಂದ ರೈತರನ್ನು ರಕ್ಷಿಸಬೇಕಾದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆಗಳ ಸಿದ್ದತೆಗಾಗಿ ಆಡಳಿತ ಯಂತ್ರವನ್ನು ನಿಷ್ಕ್ರಿಯಗೊಳಿಸಿ ಜಾತಿವಾದಿ ಹಾಗೂ ಕೋಮುವಾದಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ಮುಂದೆ ಕೆಪಿಆರ್‌ಎಸ್ ನ ಬೇಡಿಕೆಗಳೇನು ?
– ಕ್ವಿಂಟಾಲ್ ಈರುಳ್ಳಿಗೆ ಕನಿಷ್ಠ 3000 ರೂ ಬೆಂಬಲ ಬೆಲೆ ಘೋಷಣೆ ಮಾಡಬೇಕು
– ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 15000 ರೂ ಬೆಂಬಲ ಬೆಲೆ ಘೋಷಣೆ ಮಾಡಬೇಕು
– ಖರೀದಿ ಕೇಂದ್ರಗಳನ್ನು ಆರಂಭಿಸಬೇಕು
– ನಷ್ಟದಲ್ಲಿರುವ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ವ್ಯತ್ಯಾಸದ ಹಣವನ್ನು ಕೂಡಲೇ ಪಾವತಿಸಬೇಕು
– ಪಡಿತರ ವ್ಯವಸ್ಥೆಯಲ್ಲಿ ಈರುಳ್ಳಿ, ಕೊಬ್ಬರಿ ವಿತರಣೆಯನ್ನು ಸೇರ್ಪಡೆಗೊಳಿಸಬೇಕು
– ಕೊಬ್ಬರಿ ಅಡುಗೆ ತೈಲವನ್ನು ಉತ್ತೇಜಿಸುವತ್ತ ಕ್ರಮಕೈಗೊಳ್ಳಬೇಕು
ಮೇಲ್ಕಂಡ ಎಲ್ಲಾ ಕ್ರಮಗಳನ್ನು ಕೂಡಲೇ ಕೈಗೊಳ್ಳುವತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದೆ.