ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದ್ದು, ಯುವತಿಗೆ ಮುತ್ತು ಕಟ್ಟಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನಲ್ಲಿ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಕಳೆದ ಮೇ ತಿಂಗಳಲ್ಲಿ ಕುಟುಂಬಸ್ಥರು ಯುವತಿಗೆ ಮುತ್ತು ಕಟ್ಟಿಸಿದ್ದು, ಆರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಮುತ್ತು ಕಟ್ಟಿಸಲಾಗಿತ್ತು. ದೇವದಾಸಿ ಪುರ್ನವಸತಿ ಯೋಜನೆಯ ಅಧಿಕಾರಿ ಪೂರ್ಣಿಮಾರಿಂದ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಯುವತಿಯ ತಾಯಿ, ತಂದೆ ಹಾಗೂ ಅಕ್ಕನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಯುವತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ದಿನಗಳಾದರೂ ಅನಾರೋಗ್ಯ ಕಡಿಮೆಯಾಗಿರಲಿಲ್ಲ. ಇದಕ್ಕೆ ದೇವರ ಶಾಪವೇ ಕಾರಣ. ದೇವದಾಸಿಯನ್ನಾಗಿ ಮಾಡಿದರೆ ಗುಣಮುಖಳಾಗುತ್ತಾಳೆ ಎಂಬ ಮೌಢ್ಯದಲ್ಲಿ ಕುಟುಂದವರು ಆಕೆಯನ್ನು ದೇವದಾಸಿಯನ್ನಾಗಿ ಮಾಡಿದ್ದಾರೆ. 7 ತಿಂಗಳ ಹಿಂದೆಯೇ ದೇವಸ್ಥಾನಕ್ಕೆ ಯುವತಿಯನ್ನು ಕರೆದ್ಯೊಯ್ದ ದೇವದಾಸಿ ಪದ್ಧತಿಯ ವಿಧಿವಿಧಾನ ಮಾಡಿಸಿರುವುದು ತಿಳಿದುಬಂದಿದೆ. ಯುವತಿಯ ನಡುವಳಿಕೆ, ವಿಚಿತ್ರ ವರ್ತನೆ ಕಂಡು ಗ್ರಾಮದ ದಲಿತ ಮುಖಂಡರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು.
ಇದನ್ನೂ ಓದಿ : ದೇವದಾಸಿ ಅನಿಷ್ಟ ಪದ್ದತಿಯಿಂದ ಹೊರ ಬಂದು ಚೆಂದದ ಬದುಕು ಕಟ್ಟಿಕೊಂಡ ಮಂಜುಳ ಮಾಳ್ಗಿ
ಜನಶಕ್ತಿ ಮೀಡಿಯಾ ಜೊತೆ ದೂರವಾಣಿ ಮೂಲಕ ಮಾತನಾಡಿದ ಪೂರ್ಣಿಮಾ ಏಳುಬಾವಿ, ಗ್ರಾಮಸ್ಥರೊಬ್ಬರು ದೂರವಾಣಿ ಮೂಲಕ ನಮಗೆ ಮಾಹಿತಿ ನೀಡಿದ್ದಾರೆ, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಗ್ಯ ಸರಿ ಇಲ್ಲ ಮುತ್ತು ಕಟ್ಟಿದ್ದರೆ ಆರೋಗ್ಯ ಸರಿಯಾಗುತ್ತದೆ ಎಂದು ಯಾರೋ ಹೇಳಿದ ಮಾತನ್ನು ಕೇಳಿ ಇಂತಹ ಅನಿಷ್ಠ ಪದ್ಧತಿಗೆ ತಳ್ಳಿದ್ದಾರೆ. ಕುಟುಂಬದ ಮೇಲೆ ದೂರು ದಾಖಲಾಗಿದೆ. ಇವರಿಗೆ ಯಾರು ಸಲಹೆ ನೀಡಿದ್ದು ಎಂಬ ವಿಚಾರಣೆ ನಡೆದಿದೆ ಎಂದು ತಿಳಿಸಿದರು.
ಸದ್ಯ ಯುವತಿಯನ್ನು ಇದೀಗ ರಕ್ಷಣೆ ಮಾಡಲಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.
ದೇವದಾಸಿ ಹೆಸರಿನಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದ ಈ ಪದ್ಧತಿಯನ್ನು ಭಾರತ ಸರ್ಕಾರ 1982 ರಲ್ಲಿ ನಿಷೇಧಿಸಿತ್ತು. ಆದರೂ ಇಂದಿಗೂ ಅಲ್ಲಲ್ಲಿ ಕಾನೂನಿನ ಕಣ್ಣು ತಪ್ಪಿಸಿ ಇದು ನಡೆಯುತ್ತಿದೆ. ಈ ಘಟನೆ ಗೊತ್ತಿದ್ದು ಗ್ರಾಮದ ಜನ 7 ತಿಂಗಳವೆರೆಗೂ ಸುಮ್ಮನಿದ್ದಾರೆ ಎಂದರೆ ಮೌಢ್ಯತೆ ಹಾಗೂ ಸಮಾಜ ಎಷ್ಟು ಕಾಳಜಿಯನ್ನು ವಹಿಸುತ್ತಿದೆ ಎಂಬುದು ತಿಳಿದು ಬರುತ್ತಿದೆ. ಇಂತಹ ಘಟನೆಗಳನ್ನು ತಡೆಯಲು ಸರಕಾರ, ಅಧಿಕಾರಿಗಳು ಹಾಗೂ ಸಮಾಜದ ಪಾತ್ರವೂ ಮುಖ್ಯವಾಗಿರುತ್ತದೆ ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ