ಕೊಪ್ಪಳ : ತನ್ನ ಜಮೀನಿಗೆ ಜಾನುವಾರು ಬಂದು ಉಪಟಳ ಮಾಡಿದೆ ಎಂದು ಸಿಟ್ಟಿನಿಂದ 30 ವರ್ಷದ ದಲಿತ ಮಹಿಳೆಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಫೆಬ್ರವರಿ 3 ರಂದು ಈ ಘಟನೆ ನಡೆದಿದೆ. ಆರೋಪಿ ಅಮರೇಶ್ ಕುಂಬಾರ್ ತನ್ನ ಮನೆಯ ಮುಂದೆ ಕಟ್ಟಿದ್ದ ಹಸುವನ್ನು ರಕ್ಷಿಸಲು ಹೋದಾಗ ಚಪ್ಪಲಿಯಿಂದ ಥಳಿಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಶೋಭಮ್ಮ ಆರೋಪಿಸಿದ್ದಾರೆ. ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ತನ್ನ ಹಸುವನ್ನು ಮರಳಿ ತರಲು ಅಮರೇಶ್ ಅವರ ಮನೆಗೆ ಹೋಗಿದ್ದರು.ಆಗ ಚಪ್ಪಲಿಯಿಂದ ಹೊಡೆದಿದ್ದಾರೆ. ಆಕೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ನಂತರ ಆಕೆಯ ಸಂಬಂಧಿಕರು ಅಮರೇಶ್ ಮನೆಗೆ ಭೇಟಿ ನೀಡಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಜೀವಂತ, ಮುತ್ತು ಕಟ್ಟಿಸಿದ ಪ್ರಕರಣ ಬೆಳಕಿಗೆ
ದಲಿತರ ಮೇಲೆ ನಿಲ್ಲದ ದೌರ್ಜನ್ಯ : ರಾಜ್ಯದಲ್ಲಿ ವಿವಿಧೆಡೆ ದಲಿತರ ಮೇಲೆ ಸವರ್ಣೀಯರು ದೌರ್ಜನ್ಯ ಎಸಗುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಕೊಪ್ಪಳದ ಈ ಮೇಲಿನ ಘಟನೆಯ ರೀತಿಯಲ್ಲೇ ಕಳೆದ ವಾರ ಹಾಸನದಲ್ಲಿ ನಡೆದಿತ್ತು. ಕಾಫಿ ಬೀಜ ಕದಿಯಲು ಬಂದಿದ್ದ ಎಂದು ಆರೋಪಿಸಿ ಕಾಫಿ ತೋಟದ ಮಾಲೀಕರು ಯುವಕನೊಬ್ಬನನ್ನು ಹಿಡಿದು ಕೈಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೆಹಳ್ಳಿ ಬಳಿಯ ಬೆಳ್ಳಾವರ ಗ್ರಾಮದಲ್ಲಿ ನಡೆದಿತ್ತು.
ದಲಿತ ಮಹಿಳೆಯೊಬ್ಬಳು ನೀರು ಕುಡಿದಳೆಂದು ನೀರಿನ ತೊಟ್ಟಿಯನ್ನು ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ ಘಟನೆಯೂ ಇತ್ತೀಚೆಗೆ ಚಾಮರಾಜನಗರದ ಹೆಗ್ಗೋತರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಆ ಘಟನೆ ನಡೆದ ಬಳಿಕ ಚಾಮರಾಜನಗರದ ತಹಶೀಲ್ದಾರ್ ಬಸವರಾಜು ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನೇತೃತ್ವದಲ್ಲಿ ದಲಿತ ಸಮುದಾಯದವರು ಎಲ್ಲಾ ನೀರಿನ ತೊಟ್ಟಿಗಳಿಗೂ ಹೋಗಿ ನೀರು ಕುಡಿದು ಬಂದಿದ್ದರು.