ನರಗುಂದ : ನರಗುಂದದಲ್ಲಿ ಕೋಮು ದ್ವೇಷದ ಹಿನ್ನೆಲೆಯಲ್ಲಿ ಸಮೀರ್ ಎಂಬ ಯುವಕನ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರಗಿಸಲು ಒತ್ತಾಯಿಸಿ ಹಾಗೂ ಸಾವಿಗೀಡಾದ ಕುಟುಂಬ ಸೇರಿದಂತೆ ತೀವ್ರ ಗಾಯಗೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಗದಗ ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಷವಾದಿ)ದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿದ ನಂತರ ಗದಗ ಜಿಲ್ಲಾ ಸಿಪಿಐ(ಎಂ) ಕಾರ್ಯಾದರ್ಶಿ ಎಂ.ಎಸ್.ಹಡಪದ ಮಾತನಾಡಿ, ನರಗುಂದ ನಗರ ರೈತ ಬಂಡಾಯದ ನೆಲ ಎಂಬ ಖ್ಯಾತಿಯನ್ನು ಹೊಂದಿತ್ತು, ಆದರೆ ಇಂದು ಕೋಮುದ್ವೇಷಕ್ಕೆ ಕುಖ್ಯಾತಿಯನ್ನು ಪಡೆಯುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ.ಈ ಘಟನೆಯನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಮುಸ್ಲಿಂ ಯುವಕನನ್ನು ಕೊಲೆ ಮಾಡಿ ಪೊಲೀಸರಿಗೆ ಆವಾಜ್ ಹಾಕಿದ್ದ ಬಜರಂಗದಳದ ಸಂಜು ನಾಲ್ವಡೆ ಅರೆಸ್ಟ್!
ನಿನ್ನೆ ದಿನ ಸಿಪಿಐ(ಎಂ) ಗದಗ ಜಿಲ್ಲಾ ನಿಯೋಗ ಸಾವಿಗೀಡಾದ ಸಮೀರ ಕುಟುಂಬದವರ ಮನೆಗೆ ತೆರಳಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಈಗಲೂ ನಗರದಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಸಂದರ್ಭದಲ್ಲಿ ಮತೀಯ ಗಲಭೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳು ಇರುವುದನ್ನು ತಳ್ಳಿಹಾಕುವಂತಿಲ್ಲ. ಘಟನೆಯಿಂದ ಒಂದು ಕೋಮಿನ ಜನತೆ ತೀವ್ರ ಆತಂಕದಲ್ಲಿ ಮತ್ತು ಅಭದ್ರತೆಯಲ್ಲಿ ಬದುಕು ಕಳೆಯುವಂತಾಗಿದೆ. ಘಟನೆ ನಡೆದ ನಂತರ ಸಾವಿಗೀಡಾದ ಹಾಗೂ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದರು ಕುಟುಂಬಗಳ ಮನೆಗಳಿಗೆ ಯಾವುದೇ ಜವಾಬ್ದಾರಿಯುತ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆ ಆಗಲಿ ಹಾಗೂ ಕೂಗಳತೆ ದೂರದಲ್ಲಿರುವ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿ ಈವರೆಗೂ ಭೇಟಿ ನೀಡಿ ಸಾಂತ್ವನದ ಮಾತಗಳನ್ನು ಹೇಳಿಲ್ಲ, ಜೊತೆಗೆ ಅವರ ನೋವಿಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನು ಕೂಡ ಪ್ರದರ್ಶಿಸದೇ ಅಮಾನವೀಯತೆಯಿಂದ ವರ್ತಿಸಿದ್ದಾರೆ.
ಈಗಲಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಚ್ಛಿದ್ರಕಾರಿ ವ್ಯಕ್ತಿ, ಸಂಸ್ಥೆ ಹಾಗೂ ಸಂಘಟನೆಗಳು ವಿರುದ್ಧ ಕಠಿಣ ಕಾನೂನಾತ್ಮಕವಾಗಿ ಕ್ರಮಗಳನ್ನು ಜರುಗಿಸಬೇಕು.,ಸಾವಿಗೀಡಾದ ವ್ಯಕ್ತಿ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು. ಹಾಗೂ ಗಾಯಗೊಂಡ ವ್ಯಕ್ತಿ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಜಿಲ್ಲಾಡಳಿತ ತಕ್ಷಣವೇ ನೀಡಬೇಕು, ಯುವಕನನ್ನು ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಘಟನೆಗೆ ಸಂಬಂಧಿಸಿ ತನಿಖೆಯನ್ನು ನಡೆಸಬೇಕು,ಕೋಮು ಸೌಹರ್ದತೆಗೆ ದಕ್ಕೆತರುವ ಎಲ್ಲಾ ಮತಾಂದ ಸಂಘಟನೆಗಳನ್ನು ನಿಷೇಧಿಸಬೇಕು. ಕೋಮು ಸಂಘರ್ಷಕ್ಕೆ ಕಾರಣವಾಗುವ ಘಟನೆಗಳನ್ನು ಮುಂಚಿತವಾಗಿ ತಡೆಯಲು ಅನುವಾಗುವಂತೆ ಪೋಲಿಸ್ ತನಿಖಾ ಸಂಸ್ಥೆಯನ್ನು ಬಲಪಡಿ ಸಬೇಕು, ಕೋಮುಸಾಮರಸ್ಯ ಬಲಗೊಳಿಸಲು ಎಲ್ಲಾ ಜಾತಿ ಧರ್ಮದವರ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ಘಟನೆಗಳು ನಗರದಲ್ಲಿ ಮತ್ತೆ ಜರಗದಂತೆ ಕ್ರಮವಹಿಸಬೇಕು. ಎಂದು ಅವರು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಮಹೇಶಹಿರೇಮಠ, ಮಾರುತಿ ಚಿಟಗಿ, ಬಾಲು ರಾಠೋಡ, ಪೀರು ರಾಠೋಡ, ದಾವಲಸಾಬ ತಾಳಿಕೋಟಿ ,ಸಂಕಪ್ಪ ಕುರಹಟ್ಟಿ, ಹನುಮಂತ ತಾಳಿ ಇದ್ದರು.