ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಇಬ್ಬರು ಕಾರ್ಮಿಕರ ಸಾವು; ಪ್ರಕರಣ ದಾಖಲು

ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ವಸತಿ ಬಹುಮಹಡಿ ಕಟ್ಟಡದ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇದು ಜರುಗಿದ್ದು, ಶನಿವಾರ(ಫೆಬ್ರವರಿ 04) ರಾತ್ರಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ರವಿಕುಮಾರ್ ಮತ್ತು ಒಡಿಶಾ ಮೂಲದ ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಿದ್ದರು. ಘಟನೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ. ಕೋಣನಕುಂಟೆ ಬಳಿ ಇರುವ ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದನ್ನು ಓದಿ: ಸಿರಿಯಾ-ಟರ್ಕಿಯಲ್ಲಿ ಪ್ರಬಲ ಭೂಕಂಪನ; 200ಕ್ಕೂ ಮಂದಿ ಸಾವು-ಕಟ್ಟಡಗಳು ಕುಸಿತ

ಬಯೋ ಸೆಂಟರ್‌ ಇಂಡಿಯಾದ (ಐಎನ್‌ಎ) ಕಂಪೆನಿಯಲ್ಲಿ ನೌಕರಿ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಕಂಪೆನಿಯು ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಬಹುಮಹಡಿ ಕಟ್ಟಡದಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕದ ಕೆಲಸಕ್ಕೆ ನಿಯೋಜಿಸಿತ್ತು. ರಾತ್ರಿ 7.30ರ ಸುಮಾರಿಗೆ ಮೇಲ್ವಿಚಾರಕ ರಮೇಶ್‌ ಎಂಬವರು ಕಾರ್ಮಿಕರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಿಲ್ಲ. ನಾಲ್ಕೈದು ಬಾರಿ ಪ್ರಯತ್ನಿಸಿದರೂ ಪ್ರತಿಕ್ರಿಯೆ ಬಂದಿಲ್ಲವೆಂದು ಕಟ್ಟಡದ ಭದ್ರತಾ ಸಿಬ್ಬಂದಿಗೆ ಕರೆ ಮಾಡಿ ನೋಡಲು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಎಸ್‌ಟಿಪಿ ಬಳಿ ತೆರಳಿದಾಗ ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಮೇಲ್ವಿಚಾರಕ ರಮೇಶ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಕಾರ್ಮಿಕರಿಬ್ಬರೂ ಕೊನೆಯುಸಿರೆಳೆದಿರುವುದು ಕಂಡು ಬಂದಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ದಿಲೀಪ್‌ ಕುಮಾರ್ ಅವರ ಪತ್ನಿ ಶಶಿಕಲಾ ಅವರಿಗೆ ರಾತ್ರಿ 9 ಗಂಟೆ ಸುಮಾರಿಗೆ ಪತಿ ಸಾವಿನ ಬಗ್ಗೆ ಸುದ್ದಿ ಮುಟ್ಟಿದೆ.  ಮೃತರೊಬ್ಬರ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಐವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಿರ್ಲಕ್ಷ್ಯದಿಂದ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಇವರಿಬ್ಬರು ನಗರ ಮೂಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಅದು ನಿರ್ಮಾಣ ಮತ್ತು ಸಂಸ್ಕರಣಾ ಘಟಕಗಳಲ್ಲಿದೆ.

ಸಂತ್ರಸ್ತರಿಬ್ಬರು ಕೆಲಸ ಮಾಡಿದ ಸಂಸ್ಥೆಯ ಮಾಲೀಕ ಮುಕ್ತಿಯಾರ್ ಅಹಮದ್, ಪ್ರಭು, ಬಹುಮಹಡಿ ಸಮುಚ್ಚಯದ ಆಡಳಿತಾಧಿಕಾರಿ ರಮೇಶ್ ಹಾಗೂ ಮಾಲೀಕನ ವಿರುದ್ಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *