ಸೇವೆಯಿಂದ ನಿವೃತ್ತಿ: ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಮೂಲಕ ಕಾರ್ಯನಿರ್ವಹಿಸಿದ ಕೋದಂಡರಾಮಪ್ಪ

  • ನಿವೃತ್ತಿ ದಿನದಂದು ದೆಹದಾನ ಘೋಷಿಸಿದ ಕೋದಂಡರಾಮಪ್ಪ
  • ನೌಕರಿ ಜೊತೆ ಸಾಮಾಜಿಕ ಕಾರ್ಯದಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಕೋದಂಡರಾಮಪ್ಪ

ಕಲಬುರ್ಗಿ : ಕೋದಂಡರಾಮಪ್ಪ (ಪ್ರ.ದ.ಸ) ತಮ್ಮ ವಯೋನಿವೃತ್ತಿಯ ಸಂದರ್ಭದಲ್ಲಿ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ತಮ್ಮ ದೇಹದಾನ ಪತ್ರವನ್ನು ಸಲ್ಲಿಸುವ ಮೂಲಕ ನಿವೃತ್ತಿ ಜೀವನಕ್ಕೆ ಕಾಲಿಟ್ಟರು.

ಜನವಾದಿ ಮಹಿಳಾ ಸಂಘಟನೆಯ ಯುವಸಮಿತಿಯ ಸದಸ್ಯರಾದ ನಿರ್ಮಲ ಅವರಾದಿ ಅವರು ಆದರ್ಶವಾದ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳನ್ನ ತಾವೇ ಪೇಂಟಿಂಗ ಮಾಡಿ ಈ ಸಂದರ್ಭದಲ್ಲಿ ಕಾಣಿಕೆಯಾಗಿ ಕೊಟ್ಟರು.

ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಂದು ಸಂಜೆ ತಡವಾದರೂ ಸರಿ ತಮ್ಮ ಸಂಪೂರ್ಣ ಕೆಲಸಗಳನ್ನು ಯಾವುದೇ ತಪ್ಪುಗಳಿಲ್ಲದೆ, ಹಿರಿಯ ಅಧಿಕಾರಿಗಳಿಗೂ ಮಾದರಿಯಾಗುವಂತೆ ಕೆಲಸ ನಿರ್ವಹಿಸಿದ್ದಾರೆ. ತಮ್ಮ ಕಾರ್ಯದಲ್ಲಿ ಪ್ರವೀಣರು ಮತ್ತು ಅಚ್ಚುಕಟ್ಟಗಿ ವಹಿಸಿದ ಕೆಲಸಗಳನ್ನು ಮುಗಿಸುವ ವ್ಯಕ್ತಿ ಕೋದಂಡರಾಮಪ್ಪ. ಇಂತಹ ವ್ಯಕ್ತಿಗಳು ನಮ್ಮ ಉಳಿದ ಎಲ್ಲ ಕೆಲಸಗಾರರಿಗೆ ಆದರ್ಶ ಮತ್ತು ಮಾರ್ಗದರ್ಶಕರು. ಇಂತವರು ಮತ್ತೆ ನಮಗೆ ಸಿಗುವುದು ತುಂಬಾ ಕಷ್ಟ. ಎಂದು ಹಿರಿಯ ಅಧಿಕಾರಿಗಳಾದ ಅಧೀಕ್ಷಕ ಇಂಜಿನಿಯರ್ ಆದ ಶ್ರೀನಿವಾಸ ಪಿ, ನಿವೃತ್ತ ಅಧೀಕ್ಷಕ ಇಂಜಿನಿಯರ್ ಆದ ಶಿವಶಂಕ್ರಪ್ಪ ಗುರಗುಂಟೆ, ಕಾರ್ಯನಿರ್ವಾಹಕ ಇಂಜಿನಿಯರ್ ಆದ ಕೃಷ್ಣಾ ಅಗ್ನಿಹೋತ್ರಿ, ವಿಶ್ವನಾಥ ಚಿನ್ಮಳ್ಳಿ, ಮಾರುತಿ ಗೋಖಲೆ ಮಾತನಾಡಿದರು.

ಫುಲೆ ದಂಪತಿಗಳು ಹೇಗೆ ನಮಗೆ ಆದರ್ಶವೋ ನೀಲಾ ಮತ್ತು ಕೋದಂಡರಾಮಪ್ಪ ದಂಪತಿಗಳೂ ಸಹ ನಮಗೆ ಆದರ್ಶ . ಹೀಗಾಗಿ ಈ ಸಂದರ್ಭದಲ್ಲಿ ಫುಲೆ ದಂಪತಿಗಳ ಚಿತ್ರಪಟ ಕಾಣಿಕೆಯಾಗಿ ನೀಡುತ್ತಿದ್ದೇನೆ ಎಂದು ಜನವಾದಿ ಮಹಿಳಾ ಸಂಘಟನೆಯ ಯುವಸಮಿತಿಯ ಸದಸ್ಯರಾದ ನಿರ್ಮಲಾ ಅವರಾದಿ ಹೇಳಿದರು.

ಕೋದಂಡರಾಮಪ್ಪ ಕುರಿತು ಕೆ. ನೀಲಾ ಹೀಗೆ ಬರೆದಿದ್ದಾರೆ, ನೌಕರಿಗೆ ಸೇರುವ ಆದೇಶ ಬಂದಿತ್ತು. ವಿದ್ಯಾರ್ಥಿ ಸಂಘಟನೆಗೆ (SFI) ಪೂರ್ಣಾವಧಿ ಕಾರ್ಯಕರ್ತನಾಗಿ ಮುಂದುವರೆಯುವ ಇಚ್ಛೆ ಮನದೊಳಗಡಗಿತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಸಣ್ಣದಾದ ಆರ್ಥಿಕ ಆಧಾರವೂ ಇಲ್ಲದ ಸ್ಥಿತಿ. ಸಂಘಟನೆಯ ಹಿರಿಯರು ಸಲಹೆ ಮಾಡಿದರು. ‘ಮೊದಲು ನೌಕರಿಗೆ ಸೇರು. ಆಮೇಲ್ ವಿಚಾರ ಮಾಡಿದ್ರಾಯ್ತು. ಆರ್ಥಿಕ ಆಧಾರನೂ ಬೇಕಲ್ಲ….’

ಹೊಸಪೇಟೆಯ ಕೋದಂಡರಾಮಪ್ಪ ಬೀದರಿಗೆ ಬಂದು ನೌಕರಿಗೆ ಜಾಯಿನ್ ಆದರು. ಅಲ್ಲಿಗೆ ನೇಕಾರಿಕೆಯ ಕೊಂಡಿ ಕಳಚಿ ಸರಕಾರಿ ಕಡತಗಳೊಂದಿಗೆ ಬದುಕು ಬೆಸೆದುಕೊಂಡಿತು. ಮೂವ್ವತ್ತೈದು ವರ್ಷಗಳು ನಿರಂತರವಾಗಿ ಸಮಯಕ್ಕೆ ಸರಿಯಾಗಿ ಒಪ್ಪಿಕೊಂಡ ಕಾಯಕದೊಂದಿಗೆ ಏಕಾಗ್ರತೆಯಿಂದ ತೊಡಗಿಸಿಕೊಂಡು ಇದೇ ಮೇ ಮೂವ್ವತ್ತರಂದು ನೌಕರಿಯಿಂದ ನಿವೃತ್ತಿ ಪಡೆಯಲಾಯಿತು.

ಬಾಳಬಂಡಿಯಲ್ಲಿ ಜೊತೆಯಾದ ಹೊತ್ತಲ್ಲಿ ಒಬ್ಬರು ಮನೆಯ ಆರ್ಥಿಕ ನೆರವಿಗೆ ಇನ್ನೊಬ್ಬರು ಚಳುವಳಿಗೆ ಪೂರ್ಣಾವಧಿ ಕಾರ್ಯಕರ್ತರಾಗುವುದು ಅಂತ ಮಾತಾಡಿಕೊಂಡೆವು. ನನ್ನದೊ ಖಾಸಗಿ ನೌಕರಿ. ಕೋದಂಡರಾಮಪ್ಪನದು ಸರಕಾರಿ ನೌಕರಿ. ಹೈ.ಕ. ಪ್ರದೇಶದಲ್ಲಿ ಮಹಿಳಾ ಚಳುವಳಿಗೆ ಕೆಲಸ ಮಾಡುವ ಅವಶ್ಯಕತೆ ಮನಗಂಡೆವು. ನಾನು ನೌಕರಿ ಬಿಟ್ಟೆ. ಸಮುದಾಯದಿಂದ ಮಹಿಳಾ ಸಂಘಟನೆಗೆ ಹೆಜ್ಜೆಯಿಟ್ಟೆ. ನನ್ನನ್ನು ಚಳುವಳಿಗೆ ಸಜ್ಜುಗೊಳಿಸುತ, ಅತ್ತ ನೌಕರಿಯೂ ಮಾಡುತ ಕೋದಂಡರಾಮ ದಿನಗಳ ಕಾಲಿಗೆ ಚಕ್ರ ಜೋಡಿಸಿ ನಡೆಸುತ್ತಿದ್ದನು. ಮಹಿಳಾ ಸಂಘಟನೆಯ ಮೊದಲ ಸಮಾವೇಶದ ಬ್ಯಾನರ್ (1989 ಮಾರ್ಚ್ 21) ಬರೆದದ್ದು ರಾಮ (ಕೋದಂಡರಾಮಪ್ಪ).

ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗುತಲೇ ನೌಕರಿಯಲ್ಲೂ ಕಾರ್ಯತತ್ಪರತೆಯಿಂದ ತೊಡಗಿಸಿಕೊಂಡನು. ತಮಾಷಾ ಎನ್ನುವ ಬೀದಿ ನಾಟಕ, ಬೆಲ್ಚಿ, ಮಿಡ್ ಸಮ್ಮರ್ ನೈಟ್ ಡ್ರೀಮ್, ಕೋಟೆ, ತಬರನ ಕತೆ, ಸೂರ್ಯ ಶಿಕಾರಿ, ಒಂದು ಲೋಕದ ಕತೆ, ಕಕೇಷಿಯನ್ ಜಾಕ್ ಸರ್ಕಲ್ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದನು. ಬರೆದ ಕಾವ್ಯಗಳು ಮಯೂರ ಮತ್ತಿತರ ಪತ್ರಿಕೆಗಳಲಿ ಪ್ರಕಟವಾದವು. ‘ಬದುಕ ಬೀದಿಯ ಪಯಣ’ವೆಂಬ ಜಂಟಿ ಕವನ ಸಂಕಲನಕ್ಕೆ ನಾವಿಬ್ಬರೂ ಜನ್ಮ ಕೊಟ್ಟೆವು. ನನ್ನ ಕವನಗಳು ವಾಚ್ಯದ ಪ್ರಭಾವಳಿಯಲ್ಲಿ ಮತ್ತು ಘೋಷಣೆಗಳ ಕಾವಿನಲ್ಲಿ ತೇಲುತ್ತಿದ್ದರೆ ರಾಮನ ಕಾವ್ಯಗಳು ಪೊರೆ ಬಿಚ್ಚಿದರೆ ಹೊಳೆಯುವ, ಕಡಲು ರೊಟ್ಟಿ ಚಂದ್ರ ಬೆವರು ಮುಂತಾದ ರೂಪಕಗಳೊಂದಿಗೆ ಶಬ್ದಗಳು ಕಿವಿಗೂ ಮನಕೂ ನವುರಾಗಿ ಸ್ಪರ್ಷಿಸುತ ಕಡೆಗೆ ಕಣ್ಣೊಳಗೊಂದು ಕೆಂಪು ಕೆಂಡಕೆ ಜನ್ಮ ಕೊಟ್ಟು ಎದೆಯಲ್ಲಿ ಆರದ ಜ್ವಾಲಾಗ್ನಿ ಲಿಗಿಲಿಗಿ ಹೊತ್ತಿಕೊಳ್ಳುತ್ತಿರುತ್ತಿದ್ದವು.

ಎಷ್ಟೊಂದು ನೆನಪುಗಳೊಂದಿಗೆ 18.7.21 ರಂದು ವಯೋ ನಿವೃತ್ತಿ ಕಾರ್ಯಕ್ರಮ ನಡೆಯಿತು. ಸರಕಾರಿ ಆಸ್ಪತ್ರೆಗೆ ದೇಹ ದಾನ ಪತ್ರ ಸಲ್ಲಿಸಿ ಸರ್ಟಿಫಿಕೇಟ್ ಪಡೆಯಲಾಯಿತು. ಪಿಂಚಣಿ ಹಣದಲ್ಲಿ ಸಮುದಾಯಕ್ಕೂ ಜನಶಕ್ತಿ ಮಿಡಿಯಾಕ್ಕೂ ತಲಾ ಲಕ್ಷ ರೂಪಾಯಿಗಳ ಚೆಕ್ ಕೊಟ್ಟನು. ಅಧಿಕಾರಿಗಳೂ ಮಾತಾಡಿದರು. ಸಂಘಟನೆಯವರೂ ಮಾತಾಡಿದರು. ಹೂಗುಚ್ಚಗಳೂ ಪುಸ್ತಕಗಳೂ ಹೃದಯಗಳ ಭಾವನೆ ರವಾನಿಸುವ ಭಾಗವಾಗಿ ಕೈ ಸೇರಿದವು. ಮೊಮ್ಮಗಳು ಸವ್ಯ ನನ್ನ ಅಳಿಯ ಬಸವರಾಜ ಹಾಡಿಗೆ ಹೆಜ್ಜೆ ಹಾಕಿದಳು. ಮಗಳು ಲವಿತ್ರ ತಂಗಿ ಸಾವಿತ್ರಿ ಮತ್ತು ಅಶು ಮಾವಿನಕರ್ ಹಾಡಿ ಮನ ತಣಿಸಿದರು. ಜನಗಾಯಕಿ ಶಿಲ್ಪಾ ಮುಡಬಿ ಹಾಡುಗಳು ಇಡೀ ಕಾರ್ಯಕ್ರಮದ ಸ್ಪೂರ್ತಿ ಕೇಂದ್ರವಾದವು. ನಿವೃತ್ತಿ ನಂತರ ಬೋರ್ ಆಗುವುದೆ? ಅಯ್ಯೋ ನಿವೃತ್ತಿಯ ಮಾತೆಲ್ಲಿ? ಸಮುದಾಯದ, ಜನಶಕ್ತಿ ಮಿಡಿಯಾದ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಎಷ್ಟೊಂದು ರಾಶಿ ಕೆಲಸಗಳು ಕಾಯುತಿವೆ. ಬೋರಿಗೆಲ್ಲಿದೆ ಜಾಗ? ಅಲ್ಲವೇನು ರಾಮ್? ಮತ್ತಷ್ಟು ಕೆಲಸಗಳಿಗೆ ಮುಂದಾಗು ಎಂದು ಕೆ. ನೀಲಾ ಕೋಂದಂಡರಾಮಪ್ಪಗೆ ಹೊಸ ಜವಬ್ದಾರಿ ಹೊರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *