ಕೊಡಗು: ಕೊವಿಡ್ ಸೋಂಕಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಮ ತೀರಿಹೋದಳು, ಅಮ್ಮನ ಜತೆಗಿನ ನೆನಪುಗಳ ಚಿತ್ರಗಳಿದ್ದ ಮೊಬೈಲ್ ಸಹ ಅದೇ ದಿನ ಕಾಣೆಯಾಗಿದೆ. ದಯವಿಟ್ಟು ಆ ಮೊಬೈಲ್ ಫೋನ್ ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದ ಬಾಲಕಿಗೆ ಬರೋಬ್ಬರಿ 3 ತಿಂಗಳ ನಂತರ ಆ ಭಾವನಾತ್ಮಕ ಮೊಬೈಲ್ ದೊರೆತಿದೆ.
‘ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ತಾಯಿ ಮೊಬೈಲ್‌ನಲ್ಲಿ ನೆನಪಿರುವ ಫೋಟೋಗಳಿವೆ’ಎಂದು ಬಾಲಕಿ ಹೃತಿಕ್ಷ ಕೊಡಗು ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದರು. ಆ ಪತ್ರ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ವೈರಲ್ ಆಗಿತ್ತು.
ಈಗ ಬಾಲಕಿಯ ಮೊಬೈಲ್ ಪತ್ತೆಯಾಗಿದ್ದು, ಮೊಬೈಲ್ ನ್ನು ಪೊಲೀಸರು ಹಸ್ತಾಂತರಿಸಿದ್ದಾರೆ. ಆದರೆ ಮೊಬೈಲ್ ಇಷ್ಟುದಿನ ಎಲ್ಲಿತ್ತು ಎಂಬ ಮಾಹಿತಿಯನ್ನು ಈವರೆಗೂ ಬಹಿರಂಗಪಡಿಸಿಲ್ಲ.
ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಗುಮ್ಮನಕೊಲ್ಲಿನ ನಿವಾಸಿ ನವೀನ್ ಅವರ ಪತ್ನಿ ಪ್ರಭಾ ಎಂಬುವರು ಮೇ 6 ರಂದು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಪ್ರಭಾ ಅವರ ಮೃತದೇಹದೊಂದಿಗೆ ಅವರ ವಸ್ತುಗಳಿದ್ದ ಬ್ಯಾಗ್ ಅನ್ನು ಅವರ ಪತಿ ನವೀನ್ ಅವರಿಗೆ ಆಸ್ಪತ್ರೆ ಸಿಬ್ಬಂದಿ ಹಿಂದಿರುಗಿಸಿದ್ದರು. ಆದರೆ ಅವರೊಂದಿಗಿದ್ದ ಫೋನ್ ಅನ್ನು ಮಾತ್ರ ಹಿಂದಿರುಗಿಸಿರಲಿಲ್ಲ. ಕೊನೆಗೆ ಫೋನ್ ಸಿಗದಿದ್ದಾಗ ಕೋವಿಡ್ ನಿಂದ ಬಳಲುತ್ತಿದ್ದ ಬಾಲಕಿ ಹೃತೀಕ್ಷಾ ಮನೆಯಿಂದಲೇ ವಿಡಿಯೋ ಮಾಡಿ, ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ ಬರೆದು ತನ್ನ ಅಮ್ಮನ ಫೋನ್ ಅನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಳು.
ಇದನ್ನೂ ಓದಿ : ಅಮ್ಮನ ಮೊಬೈಲ್ ಸಿಕ್ಕರೆ ಹಿಂದಿರುಗಿಸಿ – ಕೊರೊನಾಕ್ಕೆ ತಾಯಿ ಕಳೆದುಕೊಂಡ ಹುಡುಗಿಯ ಮನಕಲಕುವ ಪತ್ರ
“ನನ್ನ ಅಮ್ಮನಂತು ಹೋದರು, ಆದರೆ ಆ ಫೋನಿನಲ್ಲಿ ನಾನು, ನನ್ನ ಅಮ್ಮ ಎಲ್ಲರೂ ಜೊತೆಗಿರುವ ಫೋಟೋಗಳು” ಅದರಲ್ಲಿವೆ. ನನ್ನ ಅಮ್ಮನ ನೆನಪು ಅದರಲ್ಲಿದೆ. ದಯವಿಟ್ಟು ಫೋನ್ ಹಿಂದಿರುಗಿಸಿ ಎಂದು 9 ವರ್ಷದ ಬಾಲಕಿ ಹೃತೀಕ್ಷಾ ಮನವಿ ಮಾಡಿದ್ದಳು. ಇದು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಫೋನ್ ಕಳೆದು ಹೋದ ಮೂರು ತಿಂಗಳ ಬಳಿಕ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲೇ ಆ ಫೋನ್ ಪತ್ತೆಯಾಗಿದೆ.
ಫೋನ್ ಸಿಗುತ್ತಿದ್ದಂತೆ ಆಸ್ಪತ್ರೆ ಅಧಿಕಾರಿಗಳು ಪೊಲೀಸ್ ಠಾಣೆಗೆ ಫೋನ್ ಅದನ್ನು ಲಕೋಟೆ ಮೂಲಕ ಕಳುಹಿಸಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರು ಈ ಫೋನ್ ಪ್ರಭಾ ಅವರದೇ ಎಂದು ಅರಿತು ಬಾಲಕಿಯನ್ನು ಕರೆಸಿ ಫೋನ್ ಅನ್ನು ಬಾಲಕಿಗೆ ಹಿಂದಿರುಗಿಸಿದ್ದಾರೆ. ಠಾಣೆಗೆ ಬಂದ ಬಾಲಕಿ ಹೃತೀಕ್ಷಾ ತನ್ನ ತಾಯಿಯ ಫೋನ್ ಸಿಕ್ಕಿರುವುದಕ್ಕೆ ಸಂತಸಪಟ್ಟಿದ್ದಾಳೆ.
ಈ ಫೋನ್ ನಲ್ಲಿ ನಾನು, ಅಪ್ಪ ಮತ್ತು ಅಮ್ಮ ಎಲ್ಲರೂ ಒಟ್ಟಿಗೆ ಇದ್ದ ಫೋಟೋಗಳಿದ್ದವು. ಮನೆಯಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ದ ಫೋಟೋಗಳಿರಲಿಲ್ಲ. ಹೀಗಾಗಿ ಫೋನ್ ಸಿಕ್ಕಿರುವುದು ನನಗೆ ನನ್ನ ಅಮ್ಮನ ನೆನಪು ಮರಳಿ ಸಿಕ್ಕಿದಂತೆ ಖುಷಿಯಾಗಿದೆ ಎಂದು ಹೃತೀಕ್ಷಾ ಸಂತಸಪಟ್ಟಿದ್ದಾಳೆ.
ವರದಿ : ಆರ್ವಿ ಹಾಸನ