‘ಮೋದಿ ಹೈ ತೋ ಮನು ಹೈ’ | ಪ್ರಧಾನಿಯನ್ನು ಮನುವಿಗೆ ಹೋಲಿಸಿದ ಕಾಂಗ್ರೆಸ್ ಸಂಸದ

ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿ20 ಔತಣಕೂಟದ ಅತಿಥಿ ಪಟ್ಟಿಯಿಂದ ಹೊರಗಿಟ್ಟಿದ್ದು, ಜಾತಿ ತಾರತಮ್ಯ ಎಂದು ವಿಪಕ್ಷಗಳು ಆರೋಪಿಸಿವೆ. ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೈ-ಪ್ರೊಫೈಲ್ ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದಕ್ಕಾಗಿ ವಿಪಕ್ಷ ನಾಯಕರು ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿಯನ್ನು ‘ಮನು’ವಿಗೆ ಹೋಲಿಸಿರುವ ಕಾಂಗ್ರೆಸ್ ಸಂಸದ ಮೋಹನ್ ಕುಮಾರಮಂಗಲಂ ಅವರು, “ಮೋದಿ ಹೈ ತೋ ಮನು ಹೈ”(ಮೋದಿ ಇದ್ದರೆ ಮನು ಇದ್ದಾನೆ) ಎಂದು ಶುಕ್ರವಾರ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಹಿಂದೂ ಧರ್ಮದ ಮಾರ್ಗದರ್ಶಿಯಾದ ಮನುಸ್ಮೃತಿಯನ್ನು ಬರೆದ ಮನುವಿನ ಪರಂಪರೆಯನ್ನು ಎತ್ತಿಹಿಡಿಯುತ್ತಿದ್ದಾರೆ ಎಂದು ಕುಮಾರಮಂಗಲಂ ಅವರು ಎಕ್ಸ್‌(ಟ್ವಿಟರ್‌)ನಲ್ಲಿ ಹೇಳಿದ್ದಾರೆ. “ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಅಯೋಧ್ಯೆಯ ರಾಮ ಮಂದಿರದ ‘ಭೂಮಿ ಪೂಜೆ’ಗೆ ಆಹ್ವಾನಿಸಲಾಗಿಲ್ಲ. ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಆಹ್ವಾನಿಸಿಲ್ಲ. ಜಿ20 ಪ್ರತಿನಿಧಿಗಳ ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನು ಆಹ್ವಾನಿಸಿಲ್ಲ. ಮೋದಿ ಇದ್ದರೆ ಮನು ಇದ್ದಾನೆ (ಮೋದಿ ಹೈ ತೋ ಮನು ಹೈ)” ಎಂದು ಕುಮಾರಮಂಗಲಂ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ಗಣೇಶೋತ್ಸವಕ್ಕೆ 2 ಲಕ್ಷ ರೂ. ನೀಡಬೇಕೆಂದ ಬಿಜೆಪಿ ಶಾಸಕನ ತಂಡ, ಕುಲಪತಿ ಮೇಲೆ ಗೂಂಡಾಗಿರಿ!

ಕೇಂದ್ರ ಸರ್ಕಾರವು ಪ್ರಮುಖ ಕಾರ್ಯಕ್ರಮಗಳಿಗೆ ಹಿಂದುಳಿದ ವರ್ಗಗಳ ನಾಯಕರನ್ನು ಆಹ್ವಾನಿಸದ ಹಲವಾರು ನಿದರ್ಶನಗಳನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ವಿರೋಧ ಪಕ್ಷದ ನಾಯಕರನ್ನು G20 ಗೆ ಆಹ್ವಾನಿಸದೆ ಇರುವುದು ಕೇಂದ್ರ ಸರ್ಕಾರದ ನಾಯಕತ್ವವು ಭಾರತದ ಜನಸಂಖ್ಯೆಯ 60% ರಷ್ಟು ನಾಯಕರನ್ನು ಗೌರವಿಸುವುದಿಲ್ಲ ಎಂದು ಹೇಳುತ್ತದೆ” ಎಂದು ಹೇಳಿದ್ದಾರೆ.

ರಾಷ್ಟ್ರಪತಿಗಳು ಶನಿವಾರ ಆಯೋಜಿಸಿರುವ ಜಿ20 ಔತಣಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿಲ್ಲ ಎಂದು ಅವರ ಕಚೇರಿ ತಿಳಿಸಿದೆ. ಖರ್ಗೆ ಮಾತ್ರವಲ್ಲದೆ ಬೇರೆ ಯಾವುದೇ ರಾಜಕೀಯ ಪಕ್ಷದ ನಾಯಕರಿಗೂ ಸರ್ಕಾರ ಆಹ್ವಾನ ನೀಡಿಲ್ಲ ವರದಿಗಳು ಹೇಳಿವೆ. ಕ್ಯಾಬಿನೆಟ್ ಸದಸ್ಯರು, ರಾಜ್ಯ ಸಚಿವರು, ಮುಖ್ಯಮಂತ್ರಿಗಳು, ಭಾರತ ಸರ್ಕಾರದ ಕಾರ್ಯದರ್ಶಿಗಳು ಮತ್ತು ಇತರ ಪ್ರಮುಖ ಅತಿಥಿಗಳು ಔತಣಕೂಟಕ್ಕೆ ಆಹ್ವಾನಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿವೆ.

ಈ ಮಧ್ಯೆ, ಪ್ರಧಾನಿಯ ಆಪ್ತ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಅವರನ್ನು ಜಿ20 ಔತಣಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅವರ ಜೊತೆಗೆ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ, ಭಾರ್ತಿ ಏರ್‌ಟೆಲ್ ಸಂಸ್ಥಾಪಕ-ಅಧ್ಯಕ್ಷ ಸುನಿಲ್ ಮಿತ್ತಲ್ ಸೇರಿದಂತೆ 500 ಉದ್ಯಮಿಗಳನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ವರದಿಯನ್ನು ಸರ್ಕಾರ ನಿರಾಕರಿಸಿದೆ.

ವಿಡಿಯೊ ನೋಡಿ: ಚಂದ್ರಯಾನ 3 – ಸುತ್ತಮುತ್ತ ಖಗೋಳ ವಿಜ್ಞಾನಿ ಪಾಲಹಳ್ಳಿ ವಿಶ್ವನಾಥ್‌ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *