ತಿರುವನಂತಪುರಂ: ವಿಶ್ವವಿದ್ಯಾಲಯಗಳ ಮೇಲಿನ ರಾಜ್ಯಪಾಲರ ಅಧಿಕಾರವನ್ನು ಹಿಂಪಡೆಯುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತರಲು ಕೇರಳದ ಎಡರಂಗ ಸರ್ಕಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ನಿಮಾವಳಿಗಳಲ್ಲಿ ತಿದ್ದುಪಡಿ ತಂದು ಕುಲಪತಿ ಹುದ್ದೆಯಿಂದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರನ್ನು ವಜಾಗೊಳಿಸಲಾಗಿದೆ.
ಆರೀಫ್ ಮುಹಮ್ಮದ್ ಖಾನ್ ಅವರಿದ್ದ ಕುಲಪತಿ ಸ್ಥಾನಕ್ಕೆ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯ ವ್ಯಕ್ತಿಯನ್ನು ನೇಮಿಸಲು ವಿಶ್ವವಿದ್ಯಾಲಯದ ನಿಯಮಗಳನ್ನು ಬದಲಾಯಿಸುವುದಾಗಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಹೇಳಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಡಳಿತವು ಇನ್ನು ಮುಂದೆ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ರಾಜ್ಯಪಾಲರು ಬೇಡವೇ ಬೇಡ ಎಂದು ಹೇಳಿದೆ. ಉಪಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರ ಭಿನ್ನಾಭಿಪ್ರಾಯ ಹೊಂದಿದೆ.
ಡೀಮ್ಡ್ ವಿಶ್ವವಿದ್ಯಾಲಯದ ತಿದ್ದುಪಡಿ ನಿಯಮಗಳು ಕೇರಳ ಕಲಾಮಂಡಲದ ಆಡಳಿತ ವ್ಯವಸ್ಥೆ ಮತ್ತು ನಿರ್ವಹಣಾ ರಚನೆಯು ರಾಜ್ಯ ಸರ್ಕಾರದ ನಿರ್ಧಾರಗಳನ್ನು ಅನುಸರಿಸುತ್ತದೆ ಎಂದು ಹೇಳುತ್ತದೆ.
ರಾಜ್ಯಪಾಲರು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಕೇರಳದಲ್ಲಿ ಸಿಪಿಐ(ಎಂ೦ ನೇತೃತ್ವದ ಸರ್ಕಾರ ಎಡರಂಗ ಸರ್ಕಾರದ ಹಲವು ಮಹತ್ವದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಅನಾವಶ್ಯಕ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ.
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿ ಕೇವಲ ಕೇರಳ ಮಾತ್ರವಲ್ಲದೆ, ಬಿಜೆಪಿಯೇತರ ರಾಜ್ಯ ಸರ್ಕಾರ ಆಡಳಿತವಿರುವ ತಮಿಳುನಾಡು ಮತ್ತು ತೆಲಂಗಾಣದಲ್ಲಿಯೂ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ವಿವಾದಗಳು ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಪಾಲರ ಹುದ್ದೆಯ ಕಾರ್ಯವ್ಯಾಪ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.