ಮಂಡ್ಯ : ಕೆರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘಿಸಿ ಧ್ವಜ ಸ್ತಂಭದಲ್ಲಿ ಹಾರಿಸಲಾಗಿದ್ದ ಕೇಸರಿ ಬಾವುಟವನ್ನು ಪೊಲೀಸ್ ಬಿಗಿಭದ್ರತೆಯಲ್ಲಿ ಇಳಿಸಲಾಗಿದೆ.
ಗ್ರಾಮದ ರಂಗ ಮಂದಿರ ಬಳಿ ನೂತನವಾಗಿ ನಿರ್ಮಿಸಿದ್ದ 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿದ್ದ ಕೇಸರಿ ಬಾವುಟವನ್ನು ಸಂಘಪರಿವಾರ ಕಾರ್ಯಕರ್ತರು ಅನುಮತಿ ಇಲ್ಲದೆ ಹಾರಿಸಿದ್ದರು.
ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಹಾರಿಸಲು ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದ ಗ್ರಾಮದ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಷರತ್ತು ಉಲ್ಲಂಘಿಸಿ ಕೇಸರಿ ಧ್ವಜವನ್ನು ಹಾರಿಸಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವೀಣಾ ನೇತೃತ್ವದಲ್ಲಿ ಶನಿವಾರ ಧ್ವಜ ತೆರವಿಗೆ ಮುಂದಾಗಿತ್ತು. ಸಂಘಪರಿವಾರ ಕಾರ್ಯಕರ್ತರು, ಜಾತ್ಯತೀತ ಜನತಾದಳ ಹಾಗೂ ಬಿಜೆಪಿ ಕಾರ್ಯಕರ್ತರು ವಿರೋಧ ಮಾಡಿದ್ದರು. ರವಿವಾರ ಮುಂಜಾನೆ ಬಾವುಟ ತೆರವುಗೊಳಿಸಲು ಪೊಲೀಸ್ ಬಿಗಿಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ಧ್ವಜ ಸ್ತಂಭ ಸುತ್ತುವರೆದ ಮಹಿಳೆಯರು,ಯುವಕರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ಅಧಿಕಾರಿಗಳು, ಕಾಂಗ್ರೆಸ್ ಸರ್ಕಾರ, ಶಾಸಕ ಗಣಿಗ ರವಿಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕೇಸರಿ ಬಾವುಟವನ್ನು ಕೆಳಗೆ ಇಳಿಸಿದರು.
ಇದನ್ನೂ ಓದಿ : ಬಿಹಾರದಲ್ಲಿ ಜೆಡಿಯು-ಬಿಜೆಪಿ ಹೊಸ ಸರ್ಕಾರ ಅಸ್ತಿತ್ವಕ್ಕೆ : ಸಿಎಂ ಆಗಿ ‘ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ
ಶಾಂತಿ ಕಾಪಾಡಲು ಸಿಪಿಐಎಂ ಮನವಿ : ರಾಷ್ಟ್ರ ಧ್ವಜ ಮತ್ತು ನಾಡ ಧ್ವಜ ಹಾರಿಸಲು ಅನುಮತಿ ಪಡೆದು ಈಗ ಅನ್ಯ ಧ್ವಜ ಹಾರಿಸುವ ಮೂಲಕ ಗಲಭೆ ಉಂಟುಮಾಡುತ್ತಿರುವ ಕಿಡಿಗೇಡಿಗಳಿಗೆ ಸಹಕರಿಸದೆ ಶಾಂತಿ ಕಾಪಾಡಿಕೊಳ್ಳಬೇಕೆಂದು ಕೆರಗೋಡು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಈ ಕುರಿತು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಪತ್ರಿಕಾ ಹೇಳಿಕೆ ನೀಡಿದ್ದು, ರಾಷ್ಟ್ರ ಧ್ವಜ ಮತ್ತು ನಾಡ ಧ್ವಜ ಹಾರಿಸಲು ಧ್ವಜ ಸ್ಥಂಭ ನಿರ್ಮಿಸಲು ಅನುಮತಿ ಪಡೆದು ಈಗ ಕೇಸರಿ ಬಾವುಟ ಹಾರಿಸುವ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿರುವ ಕೋಮುವಾದಿಗಳ ಸಂಚಿಗೆ ಕೆರಗೋಡು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆ ಬಲಿಯಾಗಬಾರದು, ಕೋಮುವಾದಿಗಳ ಈ ಹುನ್ನಾರವನ್ನು ಸೋಲಿಸಬೇಕೆಂದು ಕೃಷ್ಣೇಗೌಡ ತಿಳಿಸಿದ್ದಾರೆ.
ರಾಷ್ಟ್ರ ಧ್ವಜ ಮತ್ತು ನಾಡ ಧ್ವಜ ಹಾರಿಸಲು ಸ್ಥಾಪಿಸಿರುವ ಸ್ಥಂಭದಲ್ಲಿ ಬೇರಾವುದೇ ಧ್ವಜ ಹಾರಿಸುವುದು ದೇಶ ದ್ರೋಹದ ಮತ್ತು ಕನ್ನಡ ದ್ರೋಹದ ಕೆಲಸವಾಗಿದೆ, ಇಂತಹ ಶಕ್ತಿಗಳ ಆಟಾಟೋಪಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ನಿಗ್ರಹಿಸಬೇಕೆಂದು ಕಮ್ಯುನಿಸ್ಟ್ ಪಕ್ಷ ಒತ್ತಾಯಿಸುತ್ತದೆ. ಬರೆದುಕೊಟ್ಟ ಮುಚ್ಚಳಿಕೆ ಮತ್ತು ಗ್ರಾಮ ಪಂಚಾಯತಿ ಹಾಕಿರುವ ಷರತ್ತುಗಳನ್ನು ಉಲ್ಲಂಘಿಸಿ ಅನ್ಯ ಧ್ವಜ ಹಾರಿಸುವ ಮೂಲಕ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕೋಮುವಾದಿ ಶಕ್ತಿಗಳು ಕ್ರಿಯಾಶೀಲವಾಗಿವೆ, ಜೆಡಿಎಸ್ ಪಕ್ಷ ಇದರ ಭಾಗವಾಗಿರುವುದು ನಾಡಿನ ದುರಂತವಾಗಿದೆ ಎಂದಿದ್ದಾರೆ.
ಹುಬ್ಬಳ್ಳಿ ಈದ್ಗಾ ವಿವಾದ, ಕಾಶ್ಮೀರ ಸಮಸ್ಯೆಗಳ ವಿಚಾರದಲ್ಲಿ ರಚನಾತ್ಮಕ ಮತ್ತು ಜಾತ್ಯಾತೀತ ಪಾತ್ರ ವಹಿಸಿದ್ದ ಜೆಡಿಎಸ್ ಪಕ್ಷ ಅಲ್ಪ ರಾಜಕೀಯ ಲಾಭಕ್ಕಾಗಿ ಕೋಮುವಾದಿಗಳ ಕಿಡಿಗೇಡಿ ಆಟಗಳಿಗೆ ಬಲಿಯಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಈ ವಿಡಿಯೋ ನೋಡಿ : ಗಣತಂತ್ರ 75| ಸಂವಿಧಾನ ನೀಡಿದ ಸಮಾನತೆ – ದಕ್ಕಿರುವುದೆಷ್ಟು- ಮಿಕ್ಕಿರುವುದೆಷ್ಟು ವಿಶ್ಲೇಷಣೆ : ಮೀನಾಕ್ಷಿ ಬಾಳಿ