– ಉದಯ ಗಾಂವಕಾರ
ವಾದದಲ್ಲಿ ಎದುರಾಳಿಯನ್ನು ತಬ್ಬಿಬ್ಬಾಗಿಸಲು ಅಥವಾ ಚರ್ಚೆಯನ್ನು ಆಲಿಸುತ್ತಿರುವವರಿಗೆ ಮನದಟ್ಟು ಮಾಡಲು, “ಹೌದಲ್ಲ!” ಅಂತ ಆ ಕ್ಷಣದಲ್ಲಿ ಅನ್ನಿಸುವಂತೆ ಮಾಡಿ ಬೀಸುವ ದೊಣ್ಣೆಯಿಂದ ಪಾರಾಗಲು ಚರ್ಚಾಸುರರು ಕುತರ್ಕಗಳನ್ನು ಮುಂದಿಡುತ್ತಾರೆ. ಇದಲ್ಲ ಅಂತ ಆಕಡೆಯವರಿಗೆ ಅನ್ನಿಸಿದರೂ ಕೇಳುಗರಿಗೆ ಅಹುದಹುದೆನ್ನುವಂತೆ ಮಾಡಬಲ್ಲರು. ಅಂತಹ ಕೆಲವು ಮಾದರಿಗಳು ಇಲ್ಲಿವೆ. ಈ ಮಾದರಿಗಳನ್ನು ವಿವರಿಸಲು ಸದ್ಯ ಚರ್ಚೆಯಲ್ಲಿರುವ ಒಂದು ಪ್ರಕರಣವನ್ನು ಉದಾಹರಣೆಯಾಗಿ ಬಳಸಿಕೊಂಡಿರುವೆ.
1. ಮುಖ್ಯ ವಿಷಯದ ಮೇಲೆ ಚರ್ಚಿಸುವ ಬದಲು ಚರ್ಚಿಸುತ್ತಿರುವ ವ್ಯಕ್ತಿಯ ಮೇಲೇ ಹರಿಹಾಯುವುದಕ್ಕೆ ಅಡ್ ಹೊಮಿನೆಮ್ ಫಾಲಸಿ ಎನ್ನುತ್ತಾರೆ. ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳನ್ನು ಹಿಡಿಯಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಯನ್ನು ಕೆಲವು ತರ್ಕಬದ್ಧ ಸಂಗತಿಗಳನ್ನಿಟ್ಟುಕೊಂಡು ಸಮೀರ್ ಎಂಬ ಹುಡುಗ ಕೇಳಿದಾಗ ಇಡೀ ವಿಷಯವನ್ನು ತಿರುಗಿಸಿ ಕೇಳಿದಾತನ ಧರ್ಮವನ್ನೇ ಎತ್ತಿಕೊಂಡು ಮುಖ್ಯ ವಿಷಯದಿಂದ ತಮ್ಮ ಚರ್ಚೆಯನ್ನು ಹೊರಗೆ ಕೊಂಡೊ ದಿರುವುದು ಅಂತಹ ಒಂದು ಉದಾಹರಣೆ
ಇದನ್ನೂ ಓದಿ:ಬೆಳಗಾವಿ| ಪಾಲಿಕೆ ಮೇಯರ್ ಆಗಿ ಮಂಗೇಶ ಪವಾರ ಆಯ್ಕೆ
2. ಒಂದು ಪ್ರಶ್ನೆ, ಒಂದು ಘಟನೆ ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಲ್ಲದು ಎಂದು ಭಯಪಡಿಸುವುದಕ್ಕೆ ಸ್ಲಿಪರಿ ಸ್ಲೋಪ್ ಫಾಲಸಿ ಎನ್ನುತ್ತಾರೆ. “ಒಬ್ಬ ಯೂಟ್ಯೂಬರ್ ತನ್ನ ಇಪ್ಪತ್ತು ನಿಮಿಷಗಳ ವಿಡಿಯೋದಿಂದ ನಮ್ಮ ಶ್ರದ್ಧೆಯನ್ನೇ ಅಲ್ಲಾಡಿಸುತ್ತಾನೆಂದಾದರೆ ನಮ್ಮ ಧರ್ಮಕ್ಕೆ ಎಂತಹ ಅಪಾಯವಿದೆ ಎಂದು ನನಗೆ ಆತಂಕವಾಗುತ್ತದೆ ಸ್ನೇಹಿತರೇ” ಇಂತಹ ಮಾತು ಸ್ಲಿಪರಿ ಸ್ಲೋಪ್ ಗೆ ಪಕ್ಕಾ ಉದಾಹರಣೆ
3. ಸೌಜನ್ಯ ಕೇಸಿನಲ್ಲಿ ಸಂತೋಷ್ ರಾವ್ ಅವರ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡದೇ ಇರುವುದರಿಂದ ಆತನೇ ಅಪರಾಧಿ ಎಂದು ಆರೋಪಿಸುವ ಪೋಸ್ಟರುಗಳು ಹರಿದಾಡುತ್ತಿವೆ. ಅವನಲ್ಲದಿದ್ರೆ ಮಂಪರು ಪರೀಕ್ಷೆಗೆ ಒಪ್ಪಬಹುದಿತ್ತಲ್ಲ ಎಂಬುದು ಅವರ ವಾದ. ಈ ತರ ವಾದವನ್ನು ಅಪೀಲು ಟು ಇಗ್ನರೆನ್ಸ್ ಎನ್ನುತ್ತಾರೆ. ಇದರಲ್ಲಿ ಆಗಿಲ್ಲದಿರುವುದರಿಂದ ಅದರಲ್ಲಿ ಆಗಿದೆ ಎಂಬ ಈ ವಾದ ಕೂಡಾ ಕುತರ್ಕವೇ ಆಗಿದೆ.
ಇದನ್ನೂ ಓದಿ: ಬೆಳಗಾವಿ| ಪಾಲಿಕೆ ಮೇಯರ್ ಆಗಿ ಮಂಗೇಶ ಪವಾರ ಆಯ್ಕೆ
4. “ಸಿ.ಬಿ.ಐ ಎಂದ್ರೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್. ಎಂತೆಂತ ಕೇಸುಗಳನ್ನು ಪರಿಹರಿಸಿದೆ. ಈ ಕೇಸಲ್ಲಿ ಅಷ್ಟು ದೀರ್ಘ ಸಮಯ ಹುಡುಕಿದರೂ ಅವರಿಗೆ ಸುಳಿವು ಸಿಕ್ಕಿಲ್ಲ. ನೀವು ಸುಮ್ಮನೆ ಯಾರದೋ ಹೆಸರು ಹೇಳ್ತಿರಲ್ಲ?” ಈ ತರ ವಾದ ಮಾಡುವುದರಲ್ಲಿ ಎರಡು ಬಗೆಯ ಕುತರ್ಕಗಳಿವೆ. ಮೊದಲನೆಯದು, ಸಿ.ಬಿ.ಐ ಗೆ ಸಿಕ್ಕಿಲ್ಲ ಎಂದಮೇಲೆ ನೀವು ಹೇಗೆ ಹೇಳುತ್ತೀರಿ? ಸೌಜನ್ಯಾಳ ಪೋಷಕರು ಹೇಗೆ ಅನುಮಾನ ವ್ಯಕ್ತಪಡಿಸಲು ಸಾಧ್ಯ? ಇದನ್ನು ಸರ್ಕ್ಯುಲರ್ ರೀಸನಿಂಗ್ ಎನ್ನುತ್ತಾರೆ. ಎರಡನೆಯದು ಇಂತವರೇ ಮಾಡಿದ್ದಾರೆ ಎಂದು ಯಾರೂ ಹೇಳದೇ ಇದ್ದರೂ ಸ್ವತಃ ಅದನ್ನು ಘೋಷಿಸಿ ವಾದದ ದಿಕ್ಕನ್ನು ತಪ್ಪಿಸುವುದು. ಇದು ರೆಡ್ ಹೆರಿಂಗ್ ಫಾಲಸಿ.
5. “ಅವರು ಅಷ್ಟೊಂದು ಜನರಿಗೆ ಉಪಕಾರ ಮಾಡಿದ್ದಾರೆ, ಗ್ರಾಮೀಣಾಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ” ಅಂತ ದೊಡ್ಡ ಲಿಸ್ಟ್ ನೀಡಿ “ಅವರ ಮೇಲೇಯೇ ಅನುಮಾನ ಪಡುತ್ತೀರಂದ್ರೆ ಎಂತ ಸಮಾಜ ನಮ್ಮದು” ಎಂಬ ವಿಡಿಯೋ ಹರಿದಾಡುತ್ತಿದೆ. ಈ ತರ ಒಬ್ಬ ವ್ಯಕ್ತಿಯ ಬೇರೊಂದು ಕ್ಷೇತ್ರದ ಕೆಲಸ, ಪ್ರಸಿದ್ಧಿಯನ್ನು ಇಲ್ಲಿ ಎದುರಿಟ್ಟು ಈಗಿನ ಬೇರೆ ಆರೋಪವನ್ನು ನಿರಾಕರಿಸುವುದಕ್ಕೆ ಬ್ಯಾಂಡ್ ವ್ಯಾಗನ್ ಫಾಲಸಿ ಎನ್ನುತ್ತಾರೆ.
ಇನ್ನೂ ಹಲವು ಕುತರ್ಕಗಳಿವೆ. ಸದ್ಯಕ್ಕೆ ಇಷ್ಟು ಸಾಕು…..