ವಿಜಯನಗರ: 1996ರ ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು ಕಾಯ್ದೆ ಪ್ರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಲವು ಸೌಲಭ್ಯಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು), ಹೊಸಪೇಟೆ ತಾಲ್ಲೂಕು ಸಮಿತಿ ಜಾರಿಗಾಗಿ ಸ್ಥಳೀಯ ಶಾಸಕ ಹಾಗೂ ಸಚಿವ ಆನಂದ್ ಸಿಂಗ್ ಮನೆ ಮುಂದೆ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದೆ.
ಸಿಡಬ್ಲ್ಯೂಎಫ್‌ಐ ಪ್ರಧಾನ ಕಾರ್ಯದರ್ಶಿ ಯಲ್ಲಾಲಿಂಗ ಮಾತನಾಡಿ, ದೇಶವನ್ನು ನಿರ್ಮಾಣ ಮಾಡಲು ಹೊರಟಿರುವ, ಕಟ್ಟಡ ಕಾರ್ಮಿಕರ ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು ಕಾಯ್ದೆ 1996 ರಂತೆ ಜಾರಿಗೊಂಡು, 2007ರಲ್ಲಿ ಕಲ್ಯಾಣ ಮಂಡಳಿ ನಿಯಮದಂತೆ ಜಾರಿಗೆ ಬಂದಿತು. ಮಂಡಳಿ ಜಾರಿಯಾದರೂ ಸಹ ಕಾರ್ಮಿಕರ ಜೀವನ ಬದಲಾಗಲಿಲ್ಲ ಎಂಬುದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನು ಓದಿ: ನಕಲಿ ಕಾರ್ಮಿಕ ಕಾರ್ಡ್ ರದ್ಧತಿ ಅಭಿಯಾನಕ್ಕೆ ಕಟ್ಟಡ ಕಾರ್ಮಿಕ ಫೆಡರೇಷನ್ ಬೆಂಬಲ
ನಿರ್ಮಾಣ ಕಾರ್ಮಿಕರ ಬದುಕು ಅತ್ಯಂತ ಶೋಚನೀಯ ಹೀನ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವುದನ್ನು ಬೃಹತ್ ನಗರಗಳ ರೈಲ್ವೆ ಪ್ಲಾಟ್ ಫಾರಂ, ಬಸ್ ನಿಲ್ದಾಣ, ಕೊಳಚೆ ಪ್ರದೇಶಗಳಲ್ಲಿ ಮತ್ತು ರಸ್ತೆಗಳ ಇಕ್ಕೆಲಗಳಲ್ಲಿ ಕಾಣಬಹುದು.
ನಿರ್ಮಾಣ ಕಾರ್ಮಿಕರ ಕುಟುಂಬಗಳ ಜೀವನದ ಉನ್ನತ ಮಟ್ಟದ ರಕ್ಷಣೆಗಾಗಿ ಕಾನೂನು ಇದ್ದರೂ ಯಾವುದೇ ಉಪಯೋಗಕ್ಕೆ ಬಾರದಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ಹಾಗೂ ಅಧಿಕಾರಿಗಳ ವೈಫಲ್ಯವೆಂದು ಆರೋಪಿಸಿದರು.
ಬಾಕಿ ಉಳಿದಿರುವ ಶೈಕ್ಷಣಿಕ ಸಹಾಯಧನ ಮಂಜೂರಾತಿಗಾಗಿ, 2022-23ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಮಂಡಳಿಯ ವಿಳಂಬ ಧೋರಣೆಯನ್ನು ಖಂಡಿಸಿದರು. 1996 ರ ಕಾನೂನು ಪ್ರಕಾರ ಕಟ್ಟಡ ಕಾರ್ಮಿಕರಿಗೆ ವಸತಿ ಸಾಲ ಸೌಲಭ್ಯ ಜಾರಿಗಾಗಿ, ಆರೇಳು ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಡಿಒ ಗಳನ್ನು ಬೇರೆಡೆ ಸ್ಥಳಾಂತರಕ್ಕೆ ಒತ್ತಾಯಿಸಿದರು.
ಮದುವೆ ಸಹಾಯಧನ, ಬಾಂಡ್, ಪಿಂಚಣಿ, ಮೆಡಿಕಲ್ ಸೌಲಭ್ಯಗಳ ತ್ವರಿತ ವಿಲೇವಾರಿ ಮಾಡಬೇಕು. ನಕಲಿ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು. ಮಂಡಳಿಯು ನಿಯಮದಂತೆ ಸೆಸ್ ಸಂಗ್ರಹ ಮಾಡಿ ಕಟ್ಟಡ ಕಾರ್ಮಿಕರ ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು ಕಾಯ್ದೆಗೆ ಬಳಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸಚಿವರು ಜಿಲ್ಲಾಧಿಕಾರಿಗಳ ಹಾಗೂ ಕಾರ್ಮಿಕ ಅಧಿಕಾರಿಗಳು ಜಂಟಿ ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ಆನಂದ್ ಸಿಂಗ್ ಮಾರ್ಚ್ 2 ರಂದು ಸಮಸ್ಯೆಗಳ ಈಡೇರಿಕೆಗೆ ಸಭೆ ನಿಗದಿಪಡಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ