ಸ್ಪರ್ಧಾಕಾಂಕ್ಷಿಗಳು ನಿರಾಳ : ತೆರೆಮರೆ ಪ್ರಚಾರ ಆರಂಭ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಚುನಾವಣೆ ನಡೆಸುವ ಸಂಬಂಧ ಸರ್ಕಾರವು ಗಂಗಾಧರಸ್ವಾಮಿ ಜಿ.ಎಂ. ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ಕಸಾಪ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ.
ಪರಿಷತ್ತಿನ ಅಧ್ಯಕ್ಷರ ಅವಧಿ, ಜಿಲ್ಲಾ ಮತ್ತು ಗಡಿನಾಡ ಘಟಕಗಳ ಅಧ್ಯಕ್ಷರ ಅವಧಿ ಮುಂಬರುವ ಮಾ.2ಕ್ಕೆ ಅಂತ್ಯವಾಗಲಿದೆ. ಮಾ.3ರೊಳಗೆ ಚುನಾವಣೆ ನಡೆಸಿ, ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕಿದೆ. ಪರಿಷತ್ತಿನ ಚುನಾವಣೆ ಉಪನಿಬಂಧನೆ 39 ರ ಪ್ರಕಾರ ಚುನಾವಣೆಗೆ ಮೂರು ತಿಂಗಳ ಮೊದಲೇ ಸಹಾಯಕ ಕಮಿಷನರ್ ಹುದ್ದೆಗೆ ಕಡಿಮೆ ಇಲ್ಲದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು. ಈ ಸಂಬಂಧ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಚುನಾವಣಾಧಿಕಾರಿಯು ಪರಿಷತ್ತಿನ ಉಪನಿಯಮಗಳ ಅವಕಾಶದ ಅನುಸಾರ ಚುನಾವಣೆ ಪ್ರಕ್ರಿಯೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈಗಾಗಲೆ ಕೆಲವರು ಸಾಹಿತ್ಯ ಪರಿಷತ್ ಚುನಾವಣೆಗೆ ತೆರೆಮರೆ ಕಸರತ್ತು ನಡೆಸಿದ್ದಾರೆ. ಮಹಿಳೆಯನ್ನು ಕ.ಸಾ.ಪ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿವೆ. ಸ್ಪರ್ಧೆಯ ಆಕಾಂಕ್ಷಿಗಳು ಕಾರ್ಯಕ್ರಮ, ಹೋರಾಟ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಮತಯಾಚನೆ ಆರಂಭಿಸಿರುವುದು ಅನೇಕ ಕಡೆಗಳಲ್ಲಿ ಕಂಡು ಬಂದಿದೆ. ಅವರೆಲ್ಲ ಅಧಿಕೃತ ದಿನಾಂಕಕ್ಕೆ ಕಾಯುತ್ತಾ ಕುಳಿತಿದ್ದಾರೆ. ಈ ವಾರದಲ್ಲಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಕಸಾಪ ಚುನಾವಣೆಯ ಕ್ಷಣಗಣನೆ ಈಗ ಆರಂಭವಾಗಿದೆ.