ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯ: ಹೈಕಮಾಂಡ್ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಅಂತ್ಯಗೊಂಡಿದೆ.

ನಗರದ ಶಾಂಗ್ರೀಲಾ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾದ ಶಾಸಕರಿಗೆ ಸಿಎಂ ಆಯ್ಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಪರಿಣಾಮ ಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ. ಸಭೆಯಲ್ಲಿ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳದೇ, ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರಲಿದೆ ಎಂಬ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಹೈಕಮಾಂಡ್ ಗೆ ವೀಕ್ಷಕರು ಇಂದಿನ ಶಾಸಕಾಂಗ ಸಭೆಯ ವರದಿ ನೀಡಲಿದ್ದು, ಈ ವರದಿ ಆಧರಿಸಿ ಕಾಂಗ್ರೆಸ್ ಹೈ ಕಮಾಂಡ್ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಕರ್ನಾಟಕಕ್ಕೆ ನೂತನ ಸಿಎಂ ಆಯ್ಕೆ ಮಾಡಲಿದೆ.

ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿ ತಲುಪಿದ್ದು, ನಾಳೆ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಶಾಸಕಾಂಗ ಸಭೆ ಬಳಿಕ, ಸಿಎಂ ಆಯ್ಕೆ ಸಂಬಂಧ ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಲು ವೀಕ್ಷಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಮುಂದೆ 3 ಸಾಧ್ಯತೆಗಳು ಇವೆ

1. ನೇರವಾಗಿ ಎಐಸಿಸಿಯಿಂದಲೇ ಸಿಎಂ ಯಾರು ಎಂದು ನಿರ್ಧಾರ: ಸಿದ್ದರಾಮಯ್ಯಗೆ ಸಿಎಂ ಅವಕಾಶವೋ, ಡಿ ಕೆ ಶಿವಕುಮಾರ್​ಗೆ ಅಧಿಕಾರವೋ ಎಂದು ನೇರವಾಗಿ ಎಐಸಿಸಿ ಆಯ್ಕೆ ಮಾಡಲಿದೆ.

2. ಶಾಸಕರ ಅಭಿಪ್ರಾಯ ಪಡೆದು ಹೆಚ್ಚಿನ ಒಲವು ವ್ಯಕ್ತವಾದವರಿಗೆ ಸಿಎಂ ಪಟ್ಟ: ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಪರ ಹೆಚ್ಚಿನ ಶಾಸಕರು ಬೆಂಬಲ ನೀಡುವ ಸಾಧ್ಯತೆ ಇದೆ.

3. ಅಧಿಕಾರ ಹಂಚಿಕೆ ಸೂತ್ರ: ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಇಷ್ಟು ವರ್ಷ ಒಬ್ಬೊಬ್ಬರು ಸಿಎಂ ಎಂಬ ಅಧಿಕಾರ ಹಂಚಿಕೆ ಸೂತ್ರದ ಅವಕಾಶ ಸಹ ತೆರೆದಿದೆ.

ಮೇ 18 ಕ್ಕೆ ಪ್ರಮಾಣ ವಚನ : ಕರ್ನಾಟಕದ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಗುರುವಾರದಂದು ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದು, ಇದೇ ವೇಳೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಸಮಾನ ಮನಸ್ಕ ಪಕ್ಷಗಳಿಗೆ ಕಾಂಗ್ರೆಸ್‌ ಆಹ್ವಾನ ಕಳುಹಿಸಿದೆ ಎಂದು ತಿಳಿದುಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *