ಸಂಪುಟ ರಚನೆ : ಇಂದು ಸಚಿವರ ಪಟ್ಟಿ ಅಂತಿಮ ಸಾಧ್ಯತೆ?

  • ಬುಧವಾರಕ್ಕೆ ನಿಗದಿಯಾಗಬಹುದಾ ಪ್ರಮಾಣ ವಚನ?!
  • ಒಂದು ಡಜನ್‍ಗೂ ಅಧಿಕ ಶಾಸಕರು ದೆಹಲಿಯಲ್ಲಿ!

ದೆಹಲಿ/ ಬೆಂಗಳೂರು : ಇಂದು ಸಂಜೆ ಅಥವಾ ನಾಳೆ ಸಚಿವ ಸಂಪುಟ ರಚನೆ ಫೈನಲ್ ಆಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮತೋಲಿತ ಸಂಪುಟ ರಚನೆಗೆ ಒತ್ತು ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸಿದ್ದೇನೆ. ಎಲ್ಲಾ ಶಾಸಕರು ಸಚಿವರಾಗಲು ಸಾಧ್ಯವಾಗದು. ಪ್ರಾದೇಶಿಕ ಸಮತೋಲನ ಕಾಪಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾವೆಲ್ಲ ಆಧಾರದ ಮೇಲೆ ಹಾಗೂ ಎಷ್ಟು ಹಂತದಲ್ಲಿ ಸಂಪುಟ ರಚನೆ ಮಾಡಬೇಕು ಎಂಬ ಬಗ್ಗೆ ವರಿಷ್ಠರನ್ನು ಭೇಟಿಯಾಗಿ ತೀರ್ಮಾನಿಸಲಾಗುವುದು ಎಂದರು.

ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆರು ದಿನವಾಗಿದೆ. ಆದರೆ ಸಚಿವ ಸಂಪುಟ ರಚನೆ ಇನ್ನೂ ಮಾಡಲಾಗಿಲ್ಲ. ಪ್ರವಾಹ ಪರಿಸ್ಥಿತಿ, ಏರಿಕೆ ಕಾಣುತ್ತಿರುವ ಕೋವಿಡ್ ಪ್ರಕರಣಗಳ ಕಾರಣದಿಂದ ಸಂಪುಟ ರಚನೆ ಶೀಘ್ರವೇ ಆಗಬೇಕಾದ ಒತ್ತಡವಿದೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಶಾಸಕರ ಪಟ್ಟಿಯನ್ನು ಹಿಡಿದುಕೊಂಡು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಸಚಿವರ ಪಟ್ಟಿ ಅಂತಿಮವಾಗಲಿದೆ ಎನ್ನಲಾಗಿದೆ.

ಇದನ್ನು ಓದಿ: ಸಂಪುಟ ರಚನೆ : ಸಿಎಂಗೆ ಟೆನ್ಷನ್, ಹಳಬರಿಗೆ ಕೋಕ್?!

ದೆಹಲಿಯಲ್ಲಿ ಸಚಿವರ ದಂಡು : ಸಚಿವ ಸಂಪುಟಕ್ಕೆ ಸೇರುವುದಕ್ಕಾಗಿ  ಸುಮಾರು ಒಂದು ಡಜನ್‍ಗೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಮಾಜಿ ಸಚಿವರಾದ ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್, ರಾಜುಗೌಡ ನಾಯಕ್, ಶಾಸಕರಾದ ಸತೀಶ್ ರೆಡ್ಡಿ, ಅರವಿಂದ್ ಬೆಲ್ಲದ್ ಸೇರಿದಂತೆ ಸುಮಾರು ಒಂದು ಡಜನ್‍ಗೂ ಹೆಚ್ಚಿನ ಶಾಸಕರು ದೆಹಲಿಯಲ್ಲಿ ತಂಗಿದ್ದಾರೆ.

ಸಂಪುಟಕ್ಕೆ ಸೇರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಮ್ಮ ರಾಜಕೀಯ ಗುರುಗಳ ಮೂಲಕ, ಸ್ವಾಮೀಜಿಗಳ ಮೂಲಕ, ಜಾತಿ ಲಾಭಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯಷ್ಟೇ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡುವ ವಿಫಲ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಪ್ರಹ್ಲಾದ್ ಜೋಷಿ ಮೂಲಕ ಸಿಎಂಗೆ ಬೆಲ್ಲದ್ ಸಂಪುಟ ಸೇರಲು ನಿರಂತರವಾಗಿ ಒತ್ತಡ ಹಾಕುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.ಆದರೆ ಬೆಲ್ಲದ್‍ಗೆ ಮಾಜಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಜೋಷಿಯೇ ಅಡ್ಡಿಯಾಗಿರುವುದರಿಂದ ಅವರ ಸಂಪುಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಡೌಟ್‌ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಮಾಜಿ ಸಚಿವ ಸಿ.ಸಿ.ಪಾಟೀಲ್ ಕೂಡ ನಿನ್ನೆಯಿಂದಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಪಂಚಮಸಾಲಿ ಸಮುದಾಯದಿಂದ ಈ ಬಾರಿ ಇಬ್ಬರಿಗೆ ಅಥವಾ ಮೂವರಿಗೆ  ಸಂಪುಟದಲ್ಲಿ ಸ್ಥಾನ ಸಿಗುವ ಸಂಭವವವಿದೆ ಎಂದು ಹೇಳಲಾಗುತ್ತಿದೆ.ಇದರಲ್ಲಿ ಈಗಾಗಲೇ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಖಚಿತವಾಗಿರುವುದರಿಂದ ಮತ್ತೊಂದೆಡೆ ಶಂಕರ್ ಪಟೇಲ್ ಮುನೇನಕೊಪ್ಪ ಕೂಡ ಈ ಬಾರಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಉಳಿಯಲಿರುವ ಒಂದು ಸ್ಥಾನಕ್ಕೆ ಶಾಸಕರಾದ ಅರವಿಂದ್ ಬೆಲ್ಲದ್, ಸಿ.ಸಿ.ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಅಚ್ಚರಿ ಎಂಬಂತೆ ಉಪಮುಖ್ಯಮಂತ್ರಿ ಸ್ಥಾನ ಪಡೆದಿದ್ದ ಲಕ್ಷ್ಮಣ್ ಸವದಿ ಕೂಡ ಈಗ ಸಂಪುಟ ಸೇರ್ಪಡೆಯಾಗಲು ಸರ್ಕಸ್ ನಡೆಸುತ್ತಿದ್ದಾರೆ.ಎರಡು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿರುವ ಅವರು ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಆದರೆ ಸವದಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಸಾರಿಗೆ ಇಲಾಖೆಯ ವೈಫಲ್ಯ, ಸಾರಿಗೆ ನೌಕರರ ಪ್ರತಿಭಟನೆ ನಿಯಂತ್ರಿಸದಿರುವುದು ಹಾಗೂ ಮುಖ್ಯವಾಗಿ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಇತರರ ಜೊತೆ ಸವದಿ ಕೈ ಜೋಡಿಸಿರುವ ಆರೋಪಗಳು ಕೇಳಿ ಬರುತ್ತಿವೆ.  ಸವದಿ ಹೊರಗುಳಿಯಲು ಈ ಅಂಶಗಳು ಕಾರಣವಾಗಬಹುದು.

ಕಳೆದ ಬಾರಿ ಸಂಪುಟ ವಿಸ್ತರಣೆಯಾದ ವೇಳೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಸಿಎಂ ಬೊಮ್ಮಾಯಿ ಅವರಿಗೆ ದುಂಬಾಲು ಬಿದ್ದಿದ್ದಾರೆ.ದೆಹಲಿಯಲ್ಲಿರುವ ಅವರು ನಿನ್ನೆಯಿಂದಲೇ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿ ಈ ಬಾರಿ ಸಂಪುಟಕ್ಕೆ ತೆಗೆದುಕೊಳ್ಳಲು ಸಿಎಂಗೆ ನಿರ್ದೇಶನ ನೀಡುವಂತೆ ಬೇರೆ ಬೇರೆ ನಾಯಕರ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ.ಹೀಗೆ ಬಹುತೇಕ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಂಪುಟಕ್ಕೆ ಸೇರಲು ಕೊನೆಯ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಸಂಪುಟ ರಚನೆ ಕಸರತ್ತು ಇಂದೂ ಮುಂದುವರಿಯಲಿದೆ. ಬುಧವಾರ ಅಥವಾ ಗುರುವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಬಹುದು ಎನ್ನುವುದು ಸದ್ಯದ ಲೆಕ್ಕಾಚಾರ. ಸದ್ಯ ತುರ್ತಾಗಿ ಸಂಪುಟ ರಚನೆ ಮಾಡಬೇಕಾದ ಒತ್ತಡದಲ್ಲಿರುವ ಸಿಎಂ ಬೊಮ್ಮಾಯಿ ಮೊದಲು 15 ಮಂದಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.

Donate Janashakthi Media

Leave a Reply

Your email address will not be published. Required fields are marked *