ಚಾಮರಾಜನಗರ: ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಆಕ್ಸಿಜನ್ ಪೂರೈಕೆಯಾಗದೆ ಭಾನುವಾರ ತಡರಾತ್ರಿ ಹಾಗೂ ಇಂದು ಬೆಳಗ್ಗೆ 24ಕ್ಕೂ ಹೆಚ್ಚು ಕರೊನಾ ಸೋಂಕಿತರು ಮೃತಪಟ್ಟ ದುರ್ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ದುರ್ಘಟನೆಯಲ್ಲಿ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೂ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.
ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳು ನನ್ನ ಕಣ್ಮುಂದೆಯೇ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ ಕೆಲವರು ಸತ್ತಿದ್ದಾರೆ. ನನಗೂ ಆಕ್ಸಿಜನ್ ನೀಡಿಲ್ಲ ತೊಂದರೆಯಾಗುತ್ತಿದೆ ಎಂದು ಭಾನುವಾರ ರಾತ್ರಿ 11 ಗಂಟೆಯಲ್ಲಿ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಹೊಮ್ಮ ಗ್ರಾಮದ ಯುವಕ ಸುರೇಂದ್ರ ತಡರಾತ್ರಿ 1 ಗಂಟೆಗೆ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾನೆ. ಇವರಿಗೆ ಎರಡು ತಿಂಗಳ ಹಿಂದಷ್ಟೆ ಚಾಮರಾಜನಗರ ತಾಲೂಕಿನ ಕೆರಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು. ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು.
ಸುರೇಂದ್ರನ ಸಾವಿನ ಸುದ್ದಿ ತಿಳಿದು ಆಸ್ಪತ್ರೆ ಬಳಿ ದೌಡಾಯಿಸಿದ ಸಂಬಂಧಿಕರು ಸುರೇಂದ್ರನನ್ನು ನೆನೆದು ಚೀರಾಡುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗ್ತಿಲ್ಲ ಎಂದು ಆತ ಕರೇ ಮಾಡಿದ್ದ. ಹೀಗೆ ಹೇಳಿ ಒಂದೆರಡು ಗಂಟೆಯೊಳಗೆ ಮೃತಪಟ್ಟಿದ್ದಾನೆ. ಆಕ್ಸಿಜನ್ ಸಿಲಿಂಡರ್ ಕೊರತೆಯಿಂದಲೇ ನಮ್ಮ ಮಗ ಸತ್ತಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ನವವಿವಾಹಿತ ಕೋವಿಡ್ಗೆ ಬಲಿಯಾಗಿರುವುದು ದುರಂತ. ಎಪ್ರಿಲ್ 29 ರಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆಕ್ಸಿಜನ್ ಘಟಕಕ್ಕೆ ಚಾಲನೆ ನೀಡಿದ್ದರು. 6 ಸಾವಿರ ಲೀಟರ್ ಆಕ್ಸಿಜನ್ ಸಾಮರ್ಥ್ಯವಿರುವ ಘಟಕ ಇದಾಗಿದೆ. ಇನ್ನು ಮುಂದೆ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎಂದಿದ್ದರು. ಘಟಕ ಸ್ಥಾಪಿಸಿದ ಮೂರು ದಿನದಲ್ಲೆ 24 ಜನ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದು ಆಕ್ಸಿಜನ್ ಘಟಕದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗೊತ್ತಾಗುತ್ತದೆ.