ಬೆಂಗಳೂರು: ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಕರ್ನಾಟಕ ರಾಜ್ಯ ಸರಕಾರವು ಘೋಷಣೆ ಮಾಡಿದ್ದ ₹3,000 ಗಳ ಆರ್ಥಿಕ ನೆರವು ನೀಡುವ ಯೋಜನೆಗೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಡಿಬಿಟಿ ಮೂಲಕ ಒಟ್ಟು 6.23 ಕೋಟಿ ರೂ. ನೆರವನ್ನು ಸರಕಾರ ನೀಡಿದೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿಯೂ ಕಲಾವಿದರಿಗೆ ನೆರವು ನೀಡಲಾಗಿತ್ತು. ಈ ಬಾರಿಯೂ ಸರಕಾರ ನೆರವಿಗೆ ಧಾವಿಸಿದೆ. ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದನ್ನು ಓದಿ: ಕೋವಿಡ್ ಎರಡನೇ ಪ್ಯಾಕೇಜ್ ಘೋಷಣೆ : ಯಾರಿಗೆ ಎಷ್ಟೆಷ್ಟು ನೆರವು, ಇಲ್ಲಿದೆ ಸಂಪೂರ್ಣ ಮಾಹಿತಿ
ಕಲಾವಿದರಿಗೆ ಆರ್ಥಿಕ ನೆರವಿಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಿ, ದಾಖಲೆಗಳನ್ನು ಪರಿಶೀಲಿಸಿ ಬಹಳಷ್ಟು ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. ಅದೇ ರೀತಿಯಲ್ಲಿ ಫಲಾನುಭವಿಗಳು ಡಿಬಿಟಿ ಆಪ್ ಮುಖಾಂತರ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ನೆರವು ವರ್ಗಾವಣೆ ಆಗಿರುವುದು ಖಾತರಿ ಪಡಿಸಿಕೊಳ್ಳಬಹುದು. ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ವಿವಿಧ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದರೂ ಕಲಾವಿದರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಡಾ|| ಎಸ್.ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ರವಿಶಂಕರ್, ನಿರ್ದೇಶಕ ಎಸ್. ರಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.