ಬೆಂಗಳೂರು : ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸು ಗುಸು ಕಳೆದ ನಾಲ್ಕು ತಿಂಗಳಿಂದ ಚರ್ಚೆಯಾಗುತ್ತಿತ್ತು. ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಶರತ್ ಬಚ್ಚೇಗೌಡ ಸ್ಪಷ್ಟ ಪಡಿಸಿರಲಿಲ್ಲ. ಆದರೆ ಅಕ್ಟೋಬರ್ 25 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಶರತ್ ಬಚ್ಚೇಗೌಡ ಬೆಂಬಲಿಗರು ಸ್ಪಷ್ಟ ಪಡಿಸಿದ್ದಾರೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಶಾಸಕ ಕೃಷ್ಣೇ ಬೈರೇಗೌಡ ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಎಂಟಿಬಿ ನಾಗರಾಜ್ ರವರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜಿನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಭರ್ಜರಿ ಗೆಲವು ಸಾಧಿಸಿದ್ದರು. ಎಂಟಿಬಿ ನಾಗರಾಜ್ ರವರಿಗೆ ಬಿಜೆಪಿ ಟಿಕೇಟ್ ನೀಡಿದ ನಂತರ ಶರತ್ ಸ್ವಾಭಿಮಾನಿ ಹೆಸರಲ್ಲಿ ಪಕ್ಷತೇರರಾಗಿ ಸ್ಪರ್ಧೆ ಮಾಡಿದ್ದರು. ಸ್ವಾಭಿಮಾನ ಗೆಲ್ಲಲಿ ಎಂದು ಪ್ರಚಾರ ನಡೆಸುವ ಮೂಲಕ ಎಂಟಿಬಿ ನಾಗರಾಜ್ ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದರು. ಹೊಸಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಚ್ಚೇಗೌಡ ಕುಟುಂಬ ವರ್ಸಸ್ ಎಂ.ಟಿ.ಬಿ ನಾಗರಾಜ್ ನಡುವೆ ನೇರ ಸ್ಪರ್ಧೆ ನಡೆಯುತ್ತಿತ್ತು.
ಉಪಚುನಾವಣೆಯಲ್ಲಿ ಬೆಜೆಪಿ, ಕಾಂಗ್ರೆಸ್, ಶರತ್ ನಡುವೆ ತ್ರಿಕೋನ ಸ್ಪರ್ಧೆ ಎರ್ಪಟ್ಟಿತ್ತು. ಎಂಟಿಬಿ ನಾಗರಾಜ್ ರನ್ನು ಸೋಲಿಸುವುದು ಕಾಂಗ್ರೆಸ್ ಮತ್ತು ಸಿದ್ರಾಮಯ್ಯನವರ ಗುರಿಯಾಗಿತ್ತು. ಕೊನೆಗೆ ಕಾಂಗ್ರೆಸ್ ತಂತ್ರ ಫಲಿಸಿ ಎಂಟಿಬಿ ಸೋಲುಣ್ಣುವಂತಾಯಿತು. ಒಂದರ್ಥದಲ್ಲಿ ಶರತ್ ಬಚ್ಚೇಗೌಡ ಗೆಲುವಿಗೆ ಕಾಂಗ್ರೆಸ್ ಕಾರಣವಾಗಿತ್ತು. ಈ ಅಂಶದಿಂದಾಗಿಯೇ ಕಾಂಗ್ರೆಸ್ ಸೇರುತ್ತಿರುವ ಸಾಧ್ಯತೆಗಳು ಹೆಚ್ಚಾಗಿವೆ.
ಶರತ್ ಬಚ್ಚೆಗೌಡರು ಕಾಂಗ್ರೆಸ್ ಚಿಹ್ನೆಯ ಜೊತೆ ಗುರುತಿಸಿಕೊಂಡಿರುವ ಫೊಟೊಗಳು ಫೆಸ್ಬುಕ್ ಹಾಗೂ ವ್ಯಾಟ್ಸಪ್ ನಲ್ಲಿ ಹರಿದಾಡುತ್ತಿವೆ. ಶರತ್ ಅಭಿಮಾನಿಗಳು, ಬೆಂಬಲಿಗರು ಈ ಫೊಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಷಯದ ಖಚಿತತೆಗಾಗಿ ಶರತ್ ರವರನ್ನು ಜನಶಕ್ತಿ ಮೀಡಿಯಾ ಫೊನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿತು ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಬಲ್ಲ ಮೂಲಗಳ ಪ್ರಕರ ಶರತ್ ಕಾಂಗ್ರೆಸ್ ಕೈ ಹಿಡಿಯುವ ಸಾಧ್ಯತ ಹೆಚ್ಚಾಗಿದ್ದು, ಅಕ್ಟೋಬರ್ 25 ರ ವರಗೆ ಕಾದು ನೋಡಬೇಕಿದೆ