ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಚಿವರಾಗಿರಲೀ, ಅಧಿಕಾರಿಗಳಾಗಿರಲಿ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿ ಪಿ.ಎಸ್. ಸಂಧುರಿಗೆ ಸೂಚನೆ ನೀಡಿರುವ ಕರ್ನಾಟಕ ಉಚ್ಛ ನ್ಯಾಯಾಲಯ ಜುಲೈ 7ರಂದು ತನಿಖಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.
ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.
ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಪಿಎಸ್‌ಐ ಅಕ್ರಮದಲ್ಲಿ ಹಲವು ಪ್ರಭಾವಿಗಳ ಕೈವಾಡವಿರುವ ಶಂಕೆ ಇದೆ. ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಮಧ್ಯವರ್ತಿಗಳು ಇದ್ದಾರೆ. ಹೀಗಾಗಿ ಸಮರ್ಪಕ ತನಿಖೆ ನಡೆಯುವ ಅವಶ್ಯಕತೆಯಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಮರ್ಪಕ ತನಿಖೆ ನಡೆಸಿ ಎಂದು ಪಿ.ಎಸ್. ಸಂಧು ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಪಿಎಸ್ಐ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪಗಳಿವೆ. ಸಮರ್ಪಕ ತನಿಖೆಯಿಂದಲೇ ನಿಜಾಂಶ ಹೊರಬೀಳಬೇಕು. ನ್ಯಾಯಾಲಯ ಪ್ರಕರಣದ ತನಿಖೆಯ ನಿಗಾ ವಹಿಸಲಿದೆ ಎಂದು ತಿಳಿಸಿದೆ.