ಬೆಂಗಳೂರು: ಇಡೀ ಕರ್ನಾಟಕ ಜನತೆಗೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ‘ಅನ್ನಭಾಗ್ಯ’ ಕೂಡ ಒಂದು. ಆದರೆ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡದಂತೆ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ. ಈ ಬಗ್ಗೆ ಜನರಿಗೂ ಗೊತ್ತಾಗಬೇಕು. ಹೀಗಾಗಿ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬರುವ ಮಂಗಳವಾರ (ಜೂ.20) ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಬಿಪಿಎಲ್ ಕುಟುಂಬದ ಪ್ರತೀ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡನೆ. “ಒಕ್ಕೂಟ ವ್ಯವಸ್ಥೆಯಲ್ಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಜೆಪಿ ನಡ್ಡಾ ಅವರು ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದ ಯೋಜನೆಗಳು ಬಂದ್ ಆಗಲಿವೆ ಎಂದಿದ್ದರು. ಈಗ ಅವರು ನುಡಿದಂತೆ ನಡೆದಿದ್ದಾರೆ.
ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ಕೊಕ್ಕೆ – ಸಿದ್ದರಾಮಯ್ಯ
ಈ ಮೂಲಕ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಲ್ಲ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ” ಎಂದು ವ್ಯಂಗ್ಯವಾಗಿ ಕುಟುಕಿದರು. ನಾವೇನು ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳಿಲ್ಲ. ಭಾರತೀಯ ಆಹಾರ ಮಂಡಳಿಗೆ ಪತ್ರ ಬರೆದು, 2,88,425 ಮೆಟ್ರಿಕ್ ಟನ್ ಅಕ್ಕಿ ಕೊಡಲು ಮನವಿ ಮಾಡಿಕೊಂಡಿದ್ದೆವು. ಅವರು ಕೂಡ ಜೂ.12ರಂದು ಪ್ರತಿಕ್ರಿಯಿಸಿ, “ನಮ್ಮಲ್ಲಿ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸ್ಟಾಕ್ ಇದೆ. ನಿಮ್ಮ ಮನವಿ ಅನುಸಾರ ಅಕ್ಕಿ ಕೊಡುತ್ತೇವೆ” ಎಂದು ಉತ್ತರಿಸಿದ್ದರು. ಆದರೆ ಮರುದಿನವೇ ಮತ್ತೊಂದು ಪತ್ರ ಬರೆದು ನಮ್ಮಲ್ಲಿ ಅಕ್ಕಿ ಸ್ಟಾಕ್ ಇಲ್ಲ ಎಂದರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಮತದಾರರನ್ನು ಕಂಡರೆ ಆಗಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ” ಎಂದರು. ಈ ಮೂಲಕ ತಮಗೆ ಮತ ಹಾಕದ ಬಡ ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರ ದ್ವೇಷ ಸಾಧಿಸುತ್ತಿದೆ.
ಬಿಪಿಎಲ್ ಕುಟುಂಬದ ಪ್ರತೀ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಜೂನ್ 20ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾಂಗ್ರೆಸ್‌ನ ಜಿಲ್ಲಾ ಘಟಕಗಳಿಗೆ ಸೂಚನೆ ತಲುಪಿಸಲಾಗುತ್ತಿದೆ. ಸ್ಥಳೀಯ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ದಿಟ್ಟ ಸಂದೇಶವನ್ನು ತಲುಪಿಸಬೇಕು. ನಮ್ಮನ್ನು ಕೇಂದ್ರ ಸರ್ಕಾರ ಹೆದರಿಸುತ್ತಿದೆ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ನಾವು ಇದರ ವಿರುದ್ಧ ಸಿಡಿಯುತ್ತೇವೆ. ಪ್ರತಿಭಟನೆ ಕೇಂದ್ರ ಸರ್ಕಾರ ಹಾಗೂ ಜನರ ಗಮನ ಸೆಳೆಯಬೇಕು ಎಂದು ಕಾರ್ಯಕರ್ಯರಿಗೆ ಹಾಗೂ ಮುಖಂಡರಿಗೆ ಕರೆ ನೀಡಿದರು.
10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ
ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ಎಷ್ಟೇ ಹೊರೆಯಾಗಲಿ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಈ ಬಗ್ಗೆ ತೆಲಂಗಾಣ, ಛತ್ತೀಸ್‌ಗಢ ಮೊದಲಾದ ರಾಜ್ಯಗಳೊಂದಿಗೆ ಈಗಾಗಲೇ ಮಾತುಕತೆ ನಡೆಯುತ್ತಿದ್ದು, ನಮ್ಮ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಮತ್ತು ಆಹಾರ ಇಲಾಖೆ ಮಂತ್ರಿಗಳು ಕೂಡ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ ಅಕ್ಕಿ ತರುವ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲಿವರೆಗೂ ಸ್ವಲ್ಪ ತಡವಾಗಬಹುದು” ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ ನಡೆಯಲಿದೆ ಎಂದು ಹೇಳಿದರು.