ವಾಷಿಂಗ್ಟನ್: ಕೋವಿಡ್-19 ರೋಗವನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಡೆ ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಅಮೇರಿಕಾದಲ್ಲಿ ನೀಡಲಾಗುತ್ತಿರುವ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯೂ ಸಹ ಡೆಲ್ಟಾ ರೂಪಾಂತರಿ ತಳಿ ವಿರುದ್ಧವೂ ಹೆಚ್ಚು ಪರಿಣಾಮಕಾರಿಯಾಗಿದೆ.
ಹೆಚ್ಚು ಸಾಂಕ್ರಾಮಿಕವಾಗಿ ಪ್ರಬಲವಾಗಿ ಹರಡುತ್ತಿರುವ ‘ಡೆಲ್ಟಾ’ಕೊರೊನಾ ರೂಪಾಂತರ ತಳಿ ವಿರುದ್ಧ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಕೋವಿಡ್ ಲಸಿಕೆಯು ಶೇಕಡಾ 85ರಷ್ಟು ಎದುರಿಸುವ ಶಕ್ತಿಯನ್ನು ಹೊಂದಿದೆ ಎಂದು ಕಂಪನಿಯು ತಿಳಿಸಿದೆ. ಒಂದು ಡೋಸ್ ಲಸಿಕೆಯು ಹೆಚ್ಚು ಪರಿಣಾಮ ಬೀರಲಿದೆ ಎಂದು ಕಂಪನಿ ತಿಳಿಸಿದೆ. ಲಸಿಕೆ ಪಡೆದು 8 ತಿಂಗಳ ಬಳಿಕವೂ ಇದು ಡೆಲ್ಟಾ ವಿರುದ್ಧ ಹೋರಾಡಲಿದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ಅಮೆರಿಕದಲ್ಲಿ ಈ ಲಸಿಕೆ ಪಡೆದಿರುವ 1.1 ಕೋಟಿ ಜನರಿಗೆ ಧೈರ್ಯ ನೀಡಿದ್ದು, ಪ್ರಬಲ ಫಲಿತಾಂಶ ನೀಡಿದೆ ಎಂದು ಅಧ್ಯಯನ ವರದಿ ಮೂಲಕ ತಿಳಿದು ಬಂದಿದೆ.
ಇದನ್ನು ಓದಿ: ಕೋವಿಡ್ ಲಸಿಕೆ : ಬಿಗಿಯಾಗುತ್ತಿರುವ ಪೇಟೆಂಟ್ ಎಂಬ ನೇಣಿನ ಕುಣಿಕೆ
ಜಾನ್ಸನ್ ಮತ್ತು ಜಾನ್ಸನ್ ಕೋವಿಡ್ ಲಸಿಕೆಯು ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ವೃದ್ಧಿಸಲಿದೆ ಎಂದು ಸಂಸ್ಥೆಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಪಾಲ್ ಸ್ಟೋಫೆಲ್ಸ್ ಹೇಳಿಕೆ ನೀಡಿದ್ದಾರೆ.
ಈ ಲಸಿಕೆಯು ಮೂಲ ವೈರಸ್ ತಡೆಯುವುದರೊಂದಿಗೆ. ಹೊಸ ರೂಪವನ್ನು ಪಡೆಯುತ್ತಿರುವ ರೂಪಾಂತರ ತಳಿ ವಿರುದ್ಧದ ಪರಿಣಾಮದಲ್ಲಿ ಸಣ್ಣ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಬೀಟಾ ರೂಪಾಂತರಕ್ಕಿಂತ ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದಂತೆ ಸುಮಾರು 100 ದೇಶಗಳಲ್ಲಿ ಕೋವಿಡ್ನ ಈ ಡೆಲ್ಟಾ ರೂಪಾಂತರವಿದೆ. ಮುಂಬರುವ ತಿಂಗಳುಗಳಲ್ಲಿ ಈ ರೂಪಾಂತರ ಇನ್ನಷ್ಟು ಹೆಚ್ಚು ಹರಡುವ ಸಾಧ್ಯತೆ ಹೆಚ್ಚಾಗಿದೆ ಇದೆ. ಇದು ಕೊರೊನಾವೈರಸ್ನ ಪ್ರಬಲ ರೂಪಾಂತರವಾಗಿದೆ ಎಂದು ಎಚ್ಚರಿಕೆಯನ್ನು ನೀಡಿದೆ.
ಔಷಧಿಗಳ ವ್ಯವಹಾರದ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಮಾಥಯ್ ಮಾಮೆನ್ ಅವರು ʻʻ ಒಂದು ಡೋಸ್ ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಅಧ್ಯಯನ ಮಾಡಿದ ಪ್ರಕಾರ, ಬಲವಾದ ಪ್ರತಿಕಾಯವನ್ನು ಸೃಷ್ಟಿ ಮಾಡುತ್ತದೆ. ಆ ಪ್ರತಿಕಾಯವು ಕ್ಷೀಣಿಸುವುದಿಲ್ಲ, ಬದಲಾಗಿ ಕಾಲ ಕಳೆದಂತೆ ಅದರಲ್ಲಿ ಸುಧಾರಣೆಯನ್ನು ನಾವು ಗಮನಿಸಬಹುದುʼʼ ಎಂದಿದ್ದಾರೆ.