ರಾಂಚಿ: ಬಿಜೆಪಿಯನ್ನು ವಿರೋಧಿಸುವ ಧ್ವನಿಗಳನ್ನು ಹತ್ತಿಕ್ಕಲು ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಇದು ಅಸಂವಿಧಾನಾತ್ಮಕ ಕೆಲಸ. ನಾನು ತಪ್ಪು ಮಾಡಿದ್ದರೆ, ನೀವೇಕೆ ಸುಮ್ಮನೆ ನನ್ನನ್ನು ಪ್ರಶ್ನೆ ಮಾಡುತ್ತಿರೀ. ಸಾಧ್ಯವಾದರೆ ಬಂದು ನನ್ನನ್ನು ಬಂಧಿಸಿ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಕ್ರಮ ಹಣ ಲೇವಾದೇವಿ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದೆ. ನೊಟೀಸ್ ಜಾರಿಯಾದ ಬೆನ್ನಲ್ಲೇ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಹೇಮಂತ್ ಸೊರೇನ್ ಕೇಂದ್ರ ಸರ್ಕಾರವನ್ನು ಖಂಡಿಸಿದ್ದಾರೆ. ಇಡಿ ಅಧಿಕಾರಿಗಳು ಬುಡಕಟ್ಟು ಜನಾಂಗದ ಮುಖ್ಯಮಂತ್ರಿಗೆ ಕಿರುಕುಳ ನೀಡಲು ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಂಚಿಯಲ್ಲಿರುವ ಇಡಿ ಕಚೇರಿಗೆ ಇಂದು(ನವೆಂಬರ್ 03) ವಿಚಾರಣೆಗೆ ಹಾಜರಾಗುವಂತೆ ನೊಟೀಸು ಜಾರಿಗೊಳಿಸಲಾಯಿತು. ಆದರೆ ಹೇಮಂತ್ ಸೊರೇನ್ ವಿಚಾರಣೆಗೆ ಹಾಜರಾಗಿಲ್ಲ. ಅದರ ಬದಲು ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿ ಕಾರ್ಯಕರ್ತರೊಂದಿಗೆ ಸಭೆಯನ್ನು ಏರ್ಪಡಿಸಿದ್ದರು.
ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಸಾವಿರಾರು ಕೋಟಿ ಸಾಲ ಪಡೆದು ವಂಚಿಸಿದ ಉದ್ಯಮಿಗಳನ್ನು ಭಾರತದಿಂದ ಓಡಿಹೋಗಲು ಬಿಟ್ಟು ವಿರೋಧ ಪಕ್ಷಗಳ ವಿರುದ್ಧ ಕೇಂದ್ರವು ಗುರಿಯಾಗಿಸಿಕೊಂಡಿದೆ ಎಂದು ಹೇಮಂತ್ ಸೊರೇನ್ ಆರೋಪಿಸಿದರು.
ನನ್ನ ವಿರುದ್ಧ ಮಾಡುತ್ತಿರುವ ಪಿತೂರಿ ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯದ ಮೇಲೆ ಮಾಡುತ್ತಿರುವ ದಾಳಿ ಎಂದು ಹೇಮಂತ್ ಸೊರೇನ್ ಉಲ್ಲೇಖಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ದಾಳಿ ಮಾಡಿದ್ದಾರೆ.
ಹೇಮಂತ್ ಸೊರೇನ್ ಕಲ್ಲಿದ್ದಲು ಗಣಿಗಾರಿಕೆಯನ್ನು ತನ್ನ ಒಡೆತನದ ಸಂಸ್ಥೆಗೇ ಟೆಂಡರ್ ನೀಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಅವರನ್ನು ಶಾಸಕ ಸ್ಥಾನದಿಂದಲೇ ವಜಾಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು.