ರಾಂಚಿ: ವಿವಿಧ ವರ್ಗಗಳಿಗೆ ನೀಡಿರುವ ಮೀಸಲಾತಿಯ ಪ್ರಮಾಣವನ್ನು ಒಟ್ಟು ಶೇ 77ಕ್ಕೆ ಹೆಚ್ಚಿಸುವ ಮಸೂದೆಯನ್ನು ಜಾರ್ಖಂಡ್ ವಿಧಾನಸಭೆ ಶುಕ್ರವಾರ ಅಂಗೀಕರಿಸಿತು. ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಿದ ಜಾರ್ಖಂಡ್ ರಾಜ್ಯ ಸರ್ಕಾರವು, ಪ್ರಸಕ್ತ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶೇ 60ರಷ್ಟು ಮೀಸಲಾತಿ ಪ್ರಮಾಣವನ್ನು ಶೇ 77ಕ್ಕೆ ಹೆಚ್ಚಳ ಮಾಡುವ ಕುರಿತು ಒಪ್ಪಿಗೆ ಸೂಚಿಸಿದೆ.
‘ಜಾರ್ಖಂಡ್ ರಾಜ್ಯದ ಹುದ್ದೆಗಳು ಹಾಗೂ ಸೇವೆಗಳಲ್ಲಿ ಮೀಸಲಾತಿ ಕಾಯ್ದೆ, 2001’ಕ್ಕೆ ತಿದ್ದುಪಡಿ ತರುವ ಮೂಲಕ ಮಸೂದೆಗೆ ಒಪ್ಪಿಗೆ ನೀಡಲಾಯಿತು. ಹೇಮಂತ್ ಸೂರೆನ್ ನೇತೃತ್ವದ ರಾಜ್ಯ ಸರ್ಕಾರ ಇಂದು ವಿಶೇಷ ಅಧಿಕವೇಶನದಲ್ಲಿ ಮಸೂದೆ ಅಂಗೀಕರಿಸಿಕೊಂಡಿದೆ.
ಖಾಲಿ ಹುದ್ದೆಗಳು ಮತ್ತು ಸೇವೆಗಳನ್ನು ಭರ್ತಿ ಮಾಡುವ ಕುರಿತಾದ ‘ಜಾರ್ಖಂಡ್ ಮೀಸಲಾತಿ (ತಿದ್ದುಪಡಿ) ಮಸೂದೆ, 2022’ ಎಂದು ಕರೆಯಲ್ಪಡುವ ಮೊದಲ ಮಸೂದೆಯು ಹೀಗೆ ಹೇಳುತ್ತದೆ:
ಇದರೊಂದಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ತೀರ ಹಿಂದುಳಿದ ವರ್ಗಗಳು (ಇಬಿಸಿ), ಇತರ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಪ್ರಸ್ತುತ ಮೀಸಲಾತಿ ಪ್ರಮಾಣ ಶೇ 60ರಷ್ಟಿದೆ.
ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸುವ ಮೂಲಕ, ರಾಜ್ಯ ಸರ್ಕಾರ ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಬದಲಾವಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದೆ.
ಮೀಸಲು ಕೋಟಾ ಶೇ.60ರಿಂದ ಶೇ.77ಕ್ಕೆ ಏರಿದೆ. ಮೀಸಲು ವರ್ಗದೊಳಗೆ, ಪರಿಶಿಷ್ಟ ಜಾತಿ ಸಮುದಾಯವು 12 ಶೇಕಡಾ ಕೋಟಾವನ್ನು ಪಡೆಯುತ್ತದೆ; ಇತರೆ ಹಿಂದುಳಿದ ಸಮುದಾಯಗಳಿಗೆ ಶೇ.27; ಪರಿಶಿಷ್ಟ ಪಂಗಡಗಳಿಗೆ 28ರಷ್ಟು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 10 ಶೇ. ಸರಕಾರ ನಡೆಸುವ ವಿಶ್ವವಿದ್ಯಾನಿಲಯ ಅಥವಾ ಕಾಲೇಜುಗಳ ಪ್ರವೇಶಕ್ಕೆ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ಸರಕಾರದ ಮೂಲಗಳು ತಿಳಿಸಿವೆ.