ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.
ಸಂಚಲನ ಸೃಷ್ಟಿಸಿರುವ ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅತ್ತ ವಿದೇಶಕ್ಕೆ ಹಾರಿದ್ದು, ಇತ್ತ ಆತನನ್ನು ಸಂಸದ ಸ್ಥಾನ ಹಾಗೂ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಬೇಕು, ಅಮಾನತುಗೊಳಿಸಬೇಕೆಂಬ ಕೂಗುಗಳು ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಇನ್ನೂ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಿಜೆಪಿಯೂ ಇದರಿಂದ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು, ಮೈತ್ರಿಯೇ ಈ ಮುಜುಗರಕ್ಕೆ ಕಾರಣವಾಗಿದೆ ಎನ್ನುವುದಂತೂ ಬಹಿರಂಗ ಸತ್ಯ.
ಹಾಸನದಿಂದ ಎಂಪಿ ಆಗಿ ಈಗ ಎನ್ಡಿಎ ಒಕ್ಕೂಟದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣನ ಉಚ್ಛಾಟನೆಯಾಗಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆಯಾದರೂ ಇದಕ್ಕಿನ್ನೂ ಪುರಾವೆಯಾಗಿ ಆದೇಶ ಪ್ರತಿ ಸಿಕ್ಕಿಲ್ಲ. ಅಲ್ಲದೇ ಅಷ್ಟು ಸುಲಭವಾಗಿ ಪ್ರಜ್ವಲ್ ರೇವಣ್ಣನ ಉಚ್ಛಾಟನೆಯೂ ಸಾಧ್ಯವಲ್ಲದ ಮಾತು ಎಂದು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಪ್ರಜ್ವಲ್ ರೇವಣ್ಣನನ್ನು ಉಚ್ಛಾಟಿಸುವ ಬಗ್ಗೆ ಎನ್ಡಿಎ ಒಕ್ಕೂಟಕ್ಕೆ ಯಾವುದೇ ತೀರ್ಮಾನವನ್ನೂ ಸದ್ಯಕ್ಕೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಜ್ವಲ್ ರೇವಣ್ಣನ ಈ ಇಶ್ಯೂ ದೇಶ ವಿದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಒಂದು ಕಡೆ ಬಿಜೆಪಿಯನ್ನೂ ಸೇರಿದಂತೆ ತೆನೆಹೊತ್ತ ಮಹಿಳೆಯನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಈಗಾಗಲೇ ಬಿಜೆಪಿ ಈ ವಿಚಾರದಲ್ಲಿ ಅಂತರಕಾಯ್ದುಕೊಳ್ಳುತ್ತಿದ್ದು, ಅತ್ತ ಸಮರ್ಥನೆಯನ್ನಾಗಲೀ, ನೇಹಾ ಹತ್ಯೆ ಪ್ರಕರಣದಲ್ಲಿ ತೋರಿಸಿದ್ದಷ್ಟೂ ಇಚ್ಛಾಶಕ್ತಿಯೂ ಇತ್ತ ತೋರಿಸುತ್ತಿಲ್ಲ ಏಕೆ? ಎಂಬುದಿಲ್ಲಿ ಗಮನಾರ್ಹ ಪ್ರಶ್ನೆ. ಪ್ರಜ್ವಲ್ ರೇವಣ್ಣರನ್ನು ಉಚ್ಛಾಟನೆ ಮಾಡಿದಲ್ಲಿ ಒಂದು ಸ್ಥಾನವನ್ನೂ ಕಳೆದುಕೊಳ್ಳುವ ಭೀತಿ ಬಿಜೆಪಿಗೆ ಇದೆ. ಅಲ್ಲದೇ ಈ ಬಾರಿ ಚುನಾವಣೆಗೆ ಹಳೆಮೈಸೂರನ್ನು ಗುರಿಯಾಗಿಸಿಕೊಂಡು ಒಕ್ಕಲಿಗ ಸಮುದಾಯದತ್ತ ಕಮಲ ಬಲೆ ಬೀಸಿದೆ. ಈ ಎಲ್ಲಾ ಲೆಕ್ಕಾಚಾರವನ್ನು ಅಳೆದು ತೂಗಿ ಪ್ರಜ್ವಲ್ ರೇವಣ್ಣನ ವಿಚಾರ ಮೇಲ್ಮಟ್ಟದಲ್ಲಿ ಚರ್ಚೆಯಾಗುವ ಸಾಧ್ಯತೆಯನ್ನು ತಳ್ಳಹಾಕುವಂತಿಲ್ಲ.
ಇದನ್ನೂ ಓದಿ: ಮೆಕ್ಯಾನಿಕ್ ಸಮುದಾಯಕ್ಕೆ ನಿಂದನಾತ್ಮಕ ಮಾತು; ನಟ ರಮೇಶ್ ಅರವಿಂದ್, ನಟಿ ಪ್ರೇಮಾ ಮತ್ತಿತರರ ವಿರುದ್ಧ ದೂರು
ಏಪ್ರಿಲ್ 30ರಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಸುತ್ತಿದ್ದು, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈಗಾಗಲೇ ಜೆಡಿಎಸ್‌ನ ಶಾಸಕ ಶರಣಗೌಡ ಕಂದ್ಕೂರು ಜಿಟಿಡಿಗೆ ಪತ್ರಬರೆದಿದ್ದು, ಪ್ರಜ್ವಲ್ ರೇವಣ್ಣನಿಂದಾಗಿ ಪಕ್ಷಕ್ಕೂ ಹಾಗೂ ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರಿಗೂ ಮುಜುಗರವಾಗಿದೆ ಎಂದು ಪತ್ರ ಬರೆದಿದ್ದಾರೆ.ಈ ಕೋರ್ ಕಮಿಟಿ ಸಭೆಗೆ ಹೆಚ್.ಡಿ.ದೇವೇಗೌಡರು ಹೋಗುತ್ತಿಲ್ಲ. ಇತ್ತ ಹೆಚ್.ಡಿ.ಕುಮಾರಸ್ವಾಮಿ ಹೋಗುತ್ತಾರೆಯೋ ಏನೂ ಗೊತ್ತಾಗಿಲ್ಲ. ತಂದೆ ಮಕ್ಕಳು ಎಲ್ಲಾ ಸೇರಿ ಆಂತರಿಕವಾಗಿ ಚರ್ಚಿಸಿ ಅದನ್ನು ನಾಳೆಯ ಕೋರ್ ಕಮಿಟಿ ಸಭೆಯ ಮುಂದೆ ಇಡುವ ಸಾಧ್ಯತೆ ಇದೆ ಎಂದು ಜೆಡಿಎಸ್‌ನ ಮೂಲಗಳು ಜನಶಕ್ತಿ ಮೀಡಿಯಾಕ್ಕೆ ಸ್ಪಷ್ಟಪಡಿಸಿವೆ. ಎಲ್ಲರ ಚಿತ್ತ ನಾಳೆಯ ಜೆಡಿಎಸ್‌ನ ಕೋರ್ ಕಮಿಟಿ ಸಭೆಯತ್ತ ನೆಟ್ಟಿದ್ದು, ಪಕ್ಷದ ಆಂತರಿಕ ವಿಚಾರಗಳು, ಚುನಾವಣೆಯ ವಿಚಾರಗಳು ಸೇರಿದಂತೆ ಮಹತ್ತರವಾಗಿ ಪ್ರಜ್ವಲ್ ರೇವಣ್ಣ ವಿಚಾರ ಚರ್ಚೆಯಾಗಿ ನಂತರ ನಿರ್ಧಾರಗಳು ಹೊರಬೀಳಲಿವೆ.
ಇದನ್ನೂ ನೋಡಿ: ಪೆನ್ ಡ್ರೈವ್ ಹೊರಬಿದ್ದ ಪರಿ : ಯಾರು ಗುರಿ?